ಗುರುವಾರ, ಜುಲೈ 21, 2022

7 ನೇ ತರಗತಿ ವಿಜ್ಞಾನ ಘಟಕ ಪರೀಕ್ಷಾ ಪ್ರಶ್ನೆಗಳು

I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1.ಕೀಟಗಳನ್ನು ಹಿಡಿಯುವ ಮತ್ತು ತಿನ್ನುವ ಸಸ್ಯ.

   a)ಕಸ್ಕ್ಯೂಟ          b)ದಾಸವಾಳ           c)ಹೂಜಿಗಿಡ            d)ಗುಲಾಬಿ

2. ದ್ಯುತಿಸಂಶ್ಲೇಷಣೆಗಾಗಿ ವಾತಾವರಣದಿಂದ ಕಾರ್ಬನ್ ಡೈಯಾಕ್ಸೈಡ್ ಒಳತೆಗೆದುಕೊಳ್ಳುವ ಸಸ್ಯದ ಭಾಗ.

   a)ಬೇರು ರೋಮ       b)ಪತ್ರ ರಂಧ್ರಗಳು         c)ಎಲೆಯ ಸಿರೆಗಳು        d)ದಳಗಳು

3.ದ್ಯುತಿಸಂಶ್ಲೇಷಣೆಯಲ್ಲಿ ಸೌರ ಶಕ್ತಿಯು ಈ ಶಕ್ತಿಯಾಗಿ ಪರಿವರ್ತಿಸಲ್ಪಡುತ್ತದೆ.

   a)ಕಾಂತಶಕ್ತಿ       b)ರಾಸಾಯನಿಕ ಶಕ್ತಿ         c)ವಿದ್ಯುತ್ ಶಕ್ತಿ       d)ಯಾಂತ್ರಿಕ ಶಕ್ತಿ.

4.ಕೊಬ್ಬು ಸಂಪೂರ್ಣವಾಗಿ ಇಲ್ಲಿ ಜೀರ್ಣಗೊಳ್ಳುತ್ತದೆ.

    a)ಜಠರ           b)ಬಾಯಿ            c)ಸಣ್ಣ ಕರುಳು                 d)ದೊಡ್ಡ ಕರುಳು

5.ಜೀರ್ಣಗೊಳ್ಳದ ಆಹಾರದಿಂದ ನೀರು ಮುಖ್ಯವಾಗಿ ಇಲ್ಲಿ ಹೀರಲ್ಪಡುತ್ತದೆ.

  a)ಜಠರ              b)ಅನ್ನನಾಳ            c)ಸಣ್ಣ ಕರುಳು                 d)ದೊಡ್ಡ ಕರುಳು

II.ಒಂದನೇ ಪಟ್ಟಿಯಲ್ಲಿರುವ ಅಂಶಗಳನ್ನು ಎರಡನೇ ಪಟ್ಟಿಯಲ್ಲಿರುವ ಉದಾಹರಣೆಗಳೊಂದಿಗೆ ಹೊಂದಿಸಿ ಬರೆಯಿರಿ.

1.ಸ್ವಪೋಷಕಗಳು      --- ಹೂಜಿ ಗಿಡ

2.ಕೀಟಹಾರಿ ಸಸ್ಯಗಳು --- ಹುಲಿ

3.ಕೊಳೆತಿನಿಗಳು         --- ಕಸ್ಕ್ಯೂಟ

4. ಪರಾವಲಂಬಿಗಳು   --- ಹಸಿರು ಸಸ್ಯಗಳು

5.ಮಾಂಸಾಹಾರಿಗಳು   --- ಶಿಲೀಂದ್ರಗಳು

III.ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.

1.ಸಸ್ಯಗಳಿಂದ ಸಂಶೇಷಿಸಲ್ಪಟ್ಟ ಆಹಾರವು _____________ ರೂಪದಲ್ಲಿ ಸಂಗ್ರಹವಾಗುವುದು.

2. ದ್ಯುತಿ ಸಂಶ್ಲೇಷಣೆಯಲ್ಲಿ ಸೌರ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ವರ್ಣಕ _____________.

3.ಮನುಷ್ಯನ ದೇಹದಲ್ಲಿ ಅತ್ಯಂತ ದೊಡ್ಡ ಗ್ರಂಥಿ ___________.

4.ಅಮೀಬಾವು ತನ್ನ ಆಹಾರವನ್ನು _______________ ಯಲ್ಲಿ ಜೀರ್ಣಿಸುತ್ತದೆ.

IV.ಒಂದು ಜೋಡಿಯ ಸಂಬಂಧ ಅರಿತು ಇನ್ನೊಂದು ಜೋಡಿಯನ್ನು ಪೂರ್ಣಗೊಳಿಸಿ.

1.ಲಾಲಾ ರಸ ಸ್ರವಿಕೆ : ಲಾಲಾ ರಸ ಗ್ರಂಥಿ : : ಪಿತ್ತರಸ ಸ್ರವಿಕೆ : _____________

2.ಕೊಬ್ಬು : _________________ : : ಪ್ರೋಟೀನ್ : ಅಮೈನೋ ಆಮ್ಲ

3.ಆಹಾರ ಹೀರಿಕೆ : ಸಣ್ಣ ಕರುಳು : : ಬ್ಯಾಕ್ಟೀರಿಯಾ ಗಳನ್ನು ಕೊಲ್ಲುವುದು : ____________

4._____________ : ಕಸ್ಕ್ಯೂಟ : : ಕೀಟಹಾರಿ ಸಸ್ಯ : ಹೂಜಿ ಗಿಡ


V.ಇವುಗಳನ್ನು ಸೂಚಿಸುವ ಸೂಕ್ತವಾದ ಒಂದು ಪದ ನೀಡಿ.

1.ಕಾರ್ಬೋಹೈಡ್ರೇಟ್ ಪ್ರೋಟೀನ್ ಕೊಬ್ಬು ವಿಟಮಿನ್ ಮತ್ತು ಖನಿಜಗಳು ; ________________

2.ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಸಸ್ಯಗಳು;_____________

3.ಬಾಯಿಯ ಕುಹರ,ಅನ್ನನಾಳ,ಜಠರ,ಸಣ್ಣ ಕರುಳು,ದೊಡ್ಡ ಕರುಳು, ಗುದನಾಳ ; ________________

4.ಆಹಾರ ಸೇವನೆ, ಜೀರ್ಣಕ್ರಿಯೆ,ಹೀರಿಕೆ, ಸ್ವಾಂಗೀಕರಣ, ವಿಸರ್ಜನೆ; _____________

VI.ಈ ಕೆಳಗಿನವುಗಳನ್ನು ಹೆಸರಿಸಿ.

1. ದ್ಯುತಿ ಸಂಶ್ಲೇಷಣೆಯಲ್ಲಿ ಬಿಡುಗಡೆಯಾಗುವ ಅನಿಲ.

2.ಎಲೆಗಳು ಅನಿಲ ವಿನಿಮಯ ನಡೆಸುವ ರಂದ್ರಗಳು.

3.ಸಸ್ಯಗಳು ಆಹಾರ ತಯಾರಿಸುವ ಕ್ರಿಯೆ.

4.ಸಣ್ಣ ಕರುಳಿನ ಒಳಬಿತ್ತಿಯಲ್ಲಿರುವ ಹಲವಾರು ಬೆರಳಿನಂತಹ ರಚನೆಗಳು.

VII.ಈ ಕೆಳಗಿನವುಗಳಿಗೆ ಕಿರು ಉತ್ತರ ನೀಡಿ.

1.ಯಾವುದನ್ನು ಸೇವಿಸಿದರೆ ನಮಗೆ ತಕ್ಷಣ ಶಕ್ತಿ ಸಿಗುವುದು?

2.ಜೀರ್ಣ ಕ್ರಿಯೆಯಲ್ಲಿ ಬಾಯಿಯ ಪಾತ್ರವೇನು?

3.ವಿಲ್ಲೈಗಳ ಕಾರ್ಯ ತಿಳಿಸಿ.

4.ಬೇಯಿಸಿದ ಎಲೆಯ ಮೇಲೆ ಅಯೋಡಿನ್ ದ್ರಾವಣ ಹಾಕಿದಾಗ ಏನಾಗುವುದು?

8 ನೇ ತರಗತಿ ಗಣಿತ ಘಟಕ ಪರೀಕ್ಷಾ ಪ್ರಶ್ನೆಗಳು

I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1. BA +25 =B2 ರಲ್ಲಿ A,B ಗಳು ಅಂಕಿಗಳಾದರೆ A ಯ ಬೆಲೆ :

    ಎ) 5          ಬಿ) 2             ಸಿ) 6          ಡಿ) 7

2.  31y5 ಎಂಬಂದು 9 ರ ಗುಣಕವಾಗಿದ್ದು y ಒಂದು ಅಂಕಿ ಆದರೆ y ಬೆಲೆ ;

     ಎ) 6           ಬಿ) 7            ಸಿ) 8         ಡಿ) 0

3.  392_  ಈ ನಾಲ್ಕಂಕಿ ಸಂಖ್ಯೆಯು 3ರ ಗುಣಕವಾಗಿದೆ. ಹಾಗಾದರೆ ಖಾಲಿ ಬಿಟ್ಟ ಬಿಡಿ ಸ್ಥಾನದ ಅಂಕಿ;

     ಎ) 2            ಬಿ) 3          ಸಿ) 4          ಡಿ) 5

4. a/b ನ ಸಂಕಲನದ ವಿಲೋಮಾಂಶ

     ಎ)a            ಬಿ) b           ಸಿ) 0       ಡಿ)-a/b

5, x-2=7 ಸಮೀಕರಣದ ಪರಿಹಾರ;

      ಎ) 9          ಬಿ) 5           ಸಿ) 7       ಡಿ) -9

II.ಒಂದು ಜೋಡಿ ಸಂಬಂಧ ಅರಿತು ಇನ್ನೊಂದು ಜೋಡಿ ಪೂರ್ಣಗೊಳಿಸಿ.

 1.1A×A=9A : A= 6    : :   2B x B = 12B :_________

2. 1210 :    2,5,10    : :    594 : ________

3.ಗುಣಾಕಾರದ ಅನನ್ಯತಾಂಶ : ______ : : ಸಂಕಲನದ ಅನನ್ಯತಾಂಶ : 0

4. x - 2 =7   :  9    : :    y+3= 10 :______

5.2x+3x=10 : 5x=10    : :    5y-2y=12 : ______

III.ಹೊಂದಿಸಿ ಬರೆಯಿರಿ.

1.ಆವೃತ ಗುಣ                   --- a + b = b + a

2.ಪರಿವರ್ತನಿಯ ನಿಯಮ   --- a +(b + c) = (a + b) + c

3.ಸಹವರ್ತನಿಯ ನಿಯಮ   --- a (b + c) = ab + ac

4,ವಿಭಾಜಕ ನಿಯಮ           --- a + b ∈ R

IV.ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ.

1.ಒಂದು ಸಂಖ್ಯೆಯ ಬಿಡಿ ಸ್ಥಾನ ________ ಆದಾಗ ಮಾತ್ರ ಅದು ಹತ್ತರಿಂದ ಪೂರ್ಣವಾಗಿ ಭಾಗವಾಗುತ್ತದೆ.

2.ಸಂಖ್ಯೆಗಳಾದ_____ ಮತ್ತು _____ ಗಳಿಗೆ ತಾವೇ ವ್ಯುತ್ಕ್ರಮಗಳು.

3. 3x= 2x+18 ರಲ್ಲಿ x = __________

4.ಒಂದು ಸಂಖ್ಯೆಗೆ 5ನ್ನು ಸೇರಿಸಿದಾಗ 30 ಬರುತ್ತದೆ.ಇದರ ಸಮೀಕರಣ ರೂಪ ___________

V.ಸರಿಯೋ ತಪ್ಪೋ ತಿಳಿಸಿ.

1.616 ಸಂಖ್ಯೆಯು 3 ರಿಂದ ಪೂರ್ಣವಾಗಿ ಭಾಗವಾಗುತ್ತದೆ.

2.ದತ್ತ ಸಂಖ್ಯೆಯ ಅಂಕಿಗಳನ್ನು ಕೂಡುತ್ತಾ ಬಂದಾಗ ಏಕಾಂಕವು 9 ಆದರೆ ಆ ಸಂಖ್ಯೆಯು 9 ರಿಂದ ಭಾಗವಾಗುತ್ತದೆ.

3.ಬಾಗಲಬ್ಧ ಸಂಖ್ಯೆಗಳು ಸಂಕಲನದ ಪರಿವರ್ತನೀಯ ಗುಣವನ್ನು ಹೊಂದಿವೆ.

4. 2x = 8 ಆದಾಗ x =⁸/₂ ಆಗುತ್ತದೆ.

VI.ಕೆಳಗಿನವುಗಳಿಗೆ ಕಿರು ಉತ್ತರ ಕೊಡಿ.

 1.  2,3,5,9,10 ಗಳಿಂದ ಪೂರ್ಣವಾಗಿ ಭಾಗವಾಗುವ ಒಂದು  ಮೂರಂಕಿ ಸಂಖ್ಯೆ  ರಚಿಸಿ.

2. 21013 ವು 9 ರಿಂದ ಪೂರ್ಣವಾಗಿ ಭಾಗವಾಗಲು ಅದಕ್ಕೆ ಕೂಡ ಬೇಕಾದ ಕನಿಷ್ಠ ಸಂಖ್ಯೆ  ಏನು?

3. 2x/3 = 18 ಸಮೀಕರಣ ಬಿಡಿಸಿರಿ.

4.ಬೈಚುಂಗನ ಅಪ್ಪ ಬೈಚುಂಗನ ಅಜ್ಜನಿಗಿಂತ 26 ವರ್ಷ ಚಿಕ್ಕವನು ಮತ್ತು ಬೈಚುಂಗನಿಗಿಂತ 29 ವರ್ಷ ದೊಡ್ಡವನು. ಮೂವರ ವಯಸ್ಸುಗಳ ಮೊತ್ತ 135 ವರ್ಷಗಳು.ಇದನ್ನು ಸಮೀಕರಣ ರೂಪದಲ್ಲಿ ಬರೆಯಿರಿ.

VII.ಈ ಕೆಳಗಿನ ಲೆಕ್ಕಾಚಾರಗಳಿಗೆ ನೀಡಿರುವ ಹಂತಗಳನ್ನು ಅನುಕ್ರಮವಾಗಿ ಒಂದರ ಕೆಳಗೆ ಒಂದರಂತೆ ಜೋಡಿಸಿ ಬರೆಯಿರಿ.

1. -⅚ ಮತ್ತು ⅝ ಇವುಗಳ ನಡುವೆ ಯಾವುದಾದರೂ 10 ಭಾಗಲಬ್ಧ ಸಂಖ್ಯೆ ಬರೆಯುವುದು.

[-5×4/6×4 = 20/24]   [-19/24, -18/24, -17/24 ….14/24]     [5×3/8×3 =15/24]   [6,8 ಗಳ ಲಸಾಅ = 24]

2.ಸಮೀಕರಣ ಬಿಡಿಸುವುದು [8x +4=3 (x-1)+7]  [5x = 0]   [8x-3x=4-4]   [x=0]   [8x +4=3x-3+7]   [x =⁰/₅]

3.ಸಮೀಕರಣ ಬಿಡಿಸಿ; [10x+7=3x-28]   [7x=-35]    [x=-5]     [10x-3x= -28 -7]     [x=-³⁵/₇]


      

ಶುಕ್ರವಾರ, ಫೆಬ್ರವರಿ 25, 2022

ರಾಸಾಯನಿಕ ಕ್ರಿಯೆಯ ಗುಣಲಕ್ಷಣಗಳು -ಪರಿಕಲ್ಪನಾ ನಕ್ಷೆ (ಮೈಂಡ್ ಮ್ಯಾಪ್)

ಈ ಲೇಖನವನ್ನು ಮೈಂಡ್ ಮ್ಯಾಪ್ ಬಳಸಿಕೊಂಡು ಬರೆಯಲಾಗಿದೆ. ಮೈಂಡ್ ಮ್ಯಾಪ್ ನ ವೀಕ್ಷಣೆಗಾಗಿ ಇಮೇಜನ್ನು ಕ್ಲಿಕ್ ಮಾಡಿ.

ರಾಸಾಯನಿಕ ಕ್ರಿಯೆ ಎಂದರೇನು?
ರಾಸಾಯನಿಕ ಬಂಧಗಳನ್ನು ಒಡೆಯುವ ಮತ್ತು ಉಂಟುಮಾಡುವ ಕ್ರಿಯೆಯನ್ನು ರಾಸಾಯನಿಕ ಕ್ರಿಯೆ ಎನ್ನುತ್ತೇವೆ.
ರಾಸಾಯನಿಕ ಬಂಧ ಎಂದರೇನು?
ವಸ್ತುವಿನ/ಗಳ ಪರಮಾಣುಗಳ ನಡುವೆ ಇಲೆಕ್ಟ್ರಾನುಗಳನ್ನು ಬಿಟ್ಟುಕೊಡುವ ಅಥವಾ ಸ್ವೀಕರಿಸುವ  ಅಥವಾ ಹಂಚಿಕೊಳ್ಳುವುದರಿಂದ ಉಂಟಾಗುವ ಬಂಧವನ್ನು ರಾಸಾಯನಿಕ ಬಂಧ ಎನ್ನುತ್ತೇವೆ.
ಪ್ರತಿವರ್ತಕ ಗಳು ಎಂದರೇನು?
ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ವಸ್ತುಗಳನ್ನು ಪ್ರತಿವರ್ತಕಗಳು ಎನ್ನುತ್ತೇವೆ.
ಉತ್ಪನ್ನಗಳು ಎಂದರೇನು?
ರಾಸಾಯನಿಕ ಕ್ರಿಯೆಯಿಂದ ಉಂಟಾದ ಹೊಸ ವಸ್ತುಗಳನ್ನು ಉತ್ಪನ್ನಗಳು ಎನ್ನುತ್ತೇವೆ.

  ನಾವು ಸಕ್ಕರೆಯನ್ನು ಕಾಯಿಸಿದಾಗ ಅದು ಹೊಸ ವಸ್ತುವಾಗಿ ಅಂದರೆ ಕಾರ್ಬನ್ ಮತ್ತು ನೀರಾವಿ ಗಳಾಗಿ ಬದಲಾಗುತ್ತದೆ.ಈ ಬದಲಾವಣೆಯನ್ನು ನಾವು ರಾಸಾಯನಿಕ ಬದಲಾವಣೆ ಎನ್ನುತ್ತೇವೆ.ಈ ರಾಸಾಯನಿಕ ಬದಲಾವಣೆಗೆ ಕಾರಣವಾದ ಕ್ರಿಯೆಯನ್ನು ರಾಸಾಯನಿಕ ಕ್ರಿಯೆ ಎನ್ನುತ್ತೇವೆ. ಇಲ್ಲಿ
ನಾವು ಸಕ್ಕರೆಯನ್ನು ಪ್ರತಿವರ್ತಕ ಎಂದರೆ ಕಾರ್ಬನ್ ಮತ್ತು ನೀರಾವಿ ಗಳನ್ನು ಉತ್ಪನ್ನಗಳು ಎನ್ನುತ್ತೇವೆ.

ರಾಸಾಯನಿಕ ಕ್ರಿಯೆಯ ಗುಣಲಕ್ಷಣಗಳು;
  1)ರಾಸಾಯನಿಕ ಕ್ರಿಯೆಯಲ್ಲಿ ಅನಿಲದ ಬಿಡುಗಡೆಯಾಗುತ್ತದೆ.
ಉದಾಹರಣೆಗೆ ಸೋಡಿಯಂ ಕಾರ್ಬೋನೇಟ್ ಮತ್ತು ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲ ಗಳನ್ನು ಸೇರಿಸಿದಾಗ ಸೋಡಿಯಂ ಕ್ಲೋರೈಡ್, ನೀರು ಮತ್ತು ಇಂಗಾಲದ ಡೈಯಾಕ್ಸೈಡ್ ಉಂಟಾಗುತ್ತವೆ.ಇಲ್ಲಿ ಕಾರ್ಬನ್ ಡೈಆಕ್ಸೈಡ್ ಎಂಬುದು ಒಂದು ಅನಿಲವಾಗಿದೆ.
2)ಬಣ್ಣದಲ್ಲಿ ಬದಲಾವಣೆ ;
ಉದಾಹರಣೆಗೆ ಪರ್ಪಲ್ ಬಣ್ಣದ ಪೊಟ್ಯಾಶಿಯಂ ಪರಮಾಂಗನೇಟ್ ಗೆ ನಿಂಬೆರಸವನ್ನು ಸೇರಿಸಿದಾಗ ಅದು ಬಣ್ಣರಹಿತ ದ್ರಾವಣವಾಗುತ್ತದೆ.
3)ಪ್ರಸಿಪಿಟೇಟ್(ಅವಕ್ಷೇಪ) ಉಂಟಾಗುವಿಕೆ;
ಉದಾಹರಣೆಗೆ ದ್ರವೀಯ ಬೇರಿಯಂ ಕ್ಲೋರೈಡ್ ಅನ್ನು ದ್ರವೀಯ ಸಲ್ಫ್ಯೂರಿಕ್ ಆಮ್ಲ ಕ್ಕೆ ಸೇರಿಸಿದಾಗ ಬಿಳಿ ಬಣ್ಣದ ಅವಕ್ಷೇಪವಾದ ಬೇರಿಯಂ ಸಲ್ಫೇಟ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲ ಉಂಟಾಗುತ್ತದೆ.
4)ಸ್ಥಿತಿಯ ಬದಲಾವಣೆ ;
ಉದಾಹರಣೆಗೆ ಮೇಣದ ಬತ್ತಿಯನ್ನು ಸುಟ್ಟಾಗ ಮಸಿ, ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಅನಿಲಗಳು ಉತ್ಪತ್ತಿಯಾಗುತ್ತವೆ.

ಬುಧವಾರ, ಫೆಬ್ರವರಿ 23, 2022

ಬೆಳಕಿನ ವಕ್ರೀಭವನ -ಪರಿಕಲ್ಪನೆಯ ಮೈಂಡ್ ಮ್ಯಾಪ್

'ಬೆಳಕಿನ ವಕ್ರೀಭವನ ಪರಿಕಲ್ಪನೆಯ  ಮೈಂಡ್ ಮ್ಯಾಪ್' - ಈ ಲೇಖನವನ್ನು ಮೈಂಡ್ ಮ್ಯಾಪ್ ಅನ್ನು ಬಳಸಿಕೊಂಡು ಬರೆಯಲಾಗಿದೆ.

ಬೆಳಕಿನ ವಕ್ರೀಭವನ ಎಂದರೇನು?
ಬೆಳಕಿನ ವಕ್ರೀಭವನವು ಒಂದು ವಿದ್ಯಮಾನ.
ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಓರೆಯಾಗಿ ಚಲಿಸುವಾಗ ತನ್ನ ಪ್ರಸರಣದ ದಿಕ್ಕನ್ನು ಬದಲಿಸುತ್ತದೆ.ಈ ವಿದ್ಯಮಾನವನ್ನು ಬೆಳಕಿನ ವಕ್ರೀಭವನ ಎನ್ನುತ್ತೇವೆ.

  ಬೆಳಕು ಬೇರೆ ಬೇರೆ ಮಾಧ್ಯಮದಲ್ಲಿ ಬೇರೆ ಬೇರೆ ವೇಗವನ್ನು ಹೊಂದಿರುತ್ತದೆ.ಏಕೆಂದರೆ ಬೇರೆ ಬೇರೆ ಮಾಧ್ಯಮಗಳ ಸಾಂದ್ರತೆ ಬೇರೆ ಬೇರೆಯಾಗಿರುತ್ತದೆ.
ಈ ಕಾರಣದಿಂದ ಮಾಧ್ಯಮದಿಂದ ಮಾಧ್ಯಮಕ್ಕೆ ಬೆಳಕು ಸಾಗುವಾಗ ಅದರ ವೇಗದಲ್ಲಿ ಬದಲಾವಣೆಯಾಗುತ್ತದೆ. ವೇಗ ಬದಲಾವಣೆಯಾದಾಗ ಅದರ ಪ್ರಸರಣದ ದಿಕ್ಕು ಬದಲಾಗುತ್ತದೆ.ಎರಡನೇ ಮಾಧ್ಯಮದಲ್ಲಿ ಬೆಳಕಿನ ವೇಗ ಹೆಚ್ಚಾದರೆ,ಎರಡು ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಪತನ ಬಿಂದುವಿನಲ್ಲಿ ಎಳೆದ ಲಂಬದಿಂದ ದೂರಕ್ಕೆ ಬಾಗುತ್ತದೆ.ಅದೇ ರೀತಿ ಎರಡನೇ ಮಾಧ್ಯಮದಲ್ಲಿ ಬೆಳಕಿನ ವೇಗ ಕಡಿಮೆಯಾದರೆ ಅದು ಪತನ ಬಿಂದುವಿನಲ್ಲಿ ಎಳೆದ ಲಂಬದ ಕಡೆಗೆ ಬಾಗುತ್ತದೆ.

ಬೆಳಕಿನ ವಕ್ರೀಭವನದ ನಿಯಮಗಳು ;
I.ಬೆಳಕಿನ ವಕ್ರೀಭವನವಾದಾಗ, ಪತನ ಕಿರಣ,ವಕ್ರಿಮ ಕಿರಣ ಮತ್ತು ಪತನ ಬಿಂದುವಿನಲ್ಲಿ ಎರಡು ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಎಳೆದ ಲಂಬ ಇವು 3 ಒಂದೇ ಸಮತಲದಲ್ಲಿ ಇರುತ್ತವೆ.
II.ಪತನಕೋನದ ಸೈನು ಮತ್ತು ವಕ್ರಿಮ ಕೋನದ ಸೈನು ಗಳಿಗೆ ಇರುವ ಅನುಪಾತ ಒಂದು ಸ್ಥಿರಾಂಕ ವಾಗಿರುತ್ತದೆ.
ಇದನ್ನು ಸ್ನೆಲ್ ನ ವಕ್ರೀಭವನದ ನಿಯಮ ಎನ್ನುತ್ತಾರೆ.
       ಈ ಸ್ಥಿರಾಂಕ ವನ್ನು ಒಂದನೇ ಮಾಧ್ಯಮಕ್ಕೆ ಸಂಬಂಧಿಸಿದಂತೆ ಎರಡನೇ ಮಾಧ್ಯಮದ ಸಾಪೇಕ್ಷ ವಕ್ರೀಭವನ ಸೂಚ್ಯಂಕ ಎನ್ನುತ್ತಾರೆ.
ವಕ್ರೀಭವನ ಸೂಚ್ಯಂಕ =ಒಂದನೇ ಮಾಧ್ಯಮದಲ್ಲಿ ಬೆಳಕಿನ ವೇಗ /ಎರಡನೇ ಮಾಧ್ಯಮದಲ್ಲಿ ಬೆಳಕಿನ ವೇಗ. ----> n = v1/v2
ಒಂದನೇ ಮಧ್ಯಮವು ಗಾಳಿ ಅಥವಾ ನಿರ್ವಾತ ಆದಾಗ ಎರಡನೇ ಮಧ್ಯಮದ ವಕ್ರೀಭವನ ಸೂಚ್ಯಂಕ n = C/v .
ಇದನ್ನು ಎರಡನೇ ಮಧ್ಯಮದ ನಿರಪೇಕ್ಷ ವಕ್ರೀಭವನ ಸೂಚ್ಯಂಕ ಎನ್ನುತ್ತೇವೆ.
  ಒಂದು ಮಾಧ್ಯಮದ ಅಥವಾ ವಸ್ತುವಿನ ವಕ್ರೀಭವನ ಸೂಚ್ಯಂಕವು ಹೆಚ್ಚಾಗಿದ್ದರೆ ಅದು ಸಾಪೇಕ್ಷವಾಗಿ ದೃಕ್ ಸಾಂದ್ರ ಮಾಧ್ಯಮವಾಗಿರುತ್ತದೆ.ಅದೇ ರೀತಿ ಒಂದು ವಸ್ತುವಿನ  ನಿರಪೇಕ್ಷ ವಕ್ರೀಭವನ ಸೂಚ್ಯಂಕವು ಕಡಿಮೆಯಾಗಿದ್ದರೆ ಅದು ದೃಕ್ ವಿರಳ ಮಾಧ್ಯಮವಾಗಿರುತ್ತದೆ.

ಈ ಲೇಖನವನ್ನು ಮೈಂಡ್ ಮ್ಯಾಪ್ ಅನ್ನು ಬಳಸಿಕೊಂಡು ಬರೆಯಲಾಗಿದೆ.

ಗುರುವಾರ, ಫೆಬ್ರವರಿ 17, 2022

ಬೆಳಕು - ಪರಿಕಲ್ಪನಾ ನಕ್ಷೆ ( ಮೈಂಡ್ ಮ್ಯಾಪ್)

ಬೆಳಕು ಪರಿಕಲ್ಪನೆಯ ಈ ಲೇಖನವನ್ನು ಮೈಂಡ್ ಮ್ಯಾಪ್ ರಚಿಸಿಕೊಂಡು ಬರೆಯಲಾಗಿದೆ.

ಬೆಳಕು ಎಂದರೇನು?
ಬೆಳಕು, ಶಕ್ತಿಯ ರೂಪಗಳಲ್ಲಿ ಒಂದು.
ಬೆಳಕಿನ ಮೂಲಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ ನೈಸರ್ಗಿಕ ಮೂಲಗಳು ಮತ್ತು ಕೃತಕ ಮೂಲಗಳು.
ಬೆಳಕಿನ ನೈಸರ್ಗಿಕ ಮೂಲಗಳಿಗೆ ನಕ್ಷತ್ರಗಳು ಮಿಂಚುಹುಳು ಇತ್ಯಾದಿ ಉದಾಹರಣೆಗಳಾಗಿವೆ.ವಿದ್ಯುತ್ ಬಲ್ಬ್ ಮೇಣದಬತ್ತಿ ಇತ್ಯಾದಿ ಬೆಳಕಿನ ಕೃತಕ ಮೂಲಗಳಿಗೆ ಉದಾಹರಣೆಗಳಾಗಿವೆ.

ಬೆಳಕಿನ ಪ್ರತಿಫಲನ ಎಂದರೇನು?
ಬೆಳಕು ವಸ್ತುವಿನ ಮೇಲೆ ಬಿದ್ದು ಹಿಂದಕ್ಕೆ ಬರುವುದಕ್ಕೆ ಬೆಳಕಿನ ಪ್ರತಿಫಲನ ಎನ್ನುತ್ತೇವೆ.
ಬೆಳಕಿನ ಪ್ರತಿಫಲನ ವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ; ನಿಯತ ಪ್ರತಿಫಲನ ಮತ್ತು ಅನಿಯತ ಪ್ರತಿಫಲನ .
ನಿಯತ ಪ್ರತಿಫಲನವು ಸಮತಲ ಮೇಲ್ಮೈಯಲ್ಲಿ ಉಂಟಾಗುತ್ತದೆ.ನಿಯತ ಪ್ರತಿಫಲನ ವಾದಾಗ ಸ್ಪಷ್ಟ ಪ್ರತಿಬಿಂಬ ಉಂಟಾಗುತ್ತದೆ.ಆದರೆ ಅನಿಯತ ಪ್ರತಿಫಲನವು ಸಮತಲವಾಗಿ ಇಲ್ಲದ ಮೇಲ್ಮೈಯಲ್ಲಿ ಉಂಟಾಗುತ್ತದೆ.ಇಲ್ಲಿ ಪ್ರತಿಬಿಂಬವು ಸ್ಪಷ್ಟವಾಗಿ ಕಾಣುವುದಿಲ್ಲ.

ಬೆಳಕಿನ ಪ್ರತಿಫಲನದ ನಿಯಮಗಳು :
ಬೆಳಕಿನ ಪ್ರತಿಫಲನ ವಾದಾಗ ಎರಡು ನಿಯಮಗಳ ಅನುಸಾರ ಉಂಟಾಗುತ್ತದೆ.
ಅವುಗಳೆಂದರೆ;
I.ಬೆಳಕಿನ ಪ್ರತಿಫಲನ ವಾದಾಗ,ಪತನ ಕಿರಣ, ಪ್ರತಿಫಲನ ಕಿರಣ ಮತ್ತು ಪತನ ಬಿಂದುವಿನಲ್ಲಿ ಎಳೆದ ಲಂಬ ಇವು ಮೂರು ಒಂದೇ ಸಮತಲದಲ್ಲಿ ಇರುತ್ತವೆ.
II.ಬೆಳಕಿನ ಪ್ರತಿಫಲನ ವಾದಾಗ ಪತನ ಕೋನವು ಪ್ರತಿಫಲನ ಕೋನಕ್ಕೆ ಸಮವಾಗಿರುತ್ತದೆ.

ದರ್ಪಣ ಎಂದರೇನು?
ನುಣುಪಾದ ಪ್ರತಿಫಲಿಸುವ ಮೇಲ್ಮೈಯನ್ನು ದರ್ಪಣ ಎನ್ನುತ್ತೇವೆ.

ದರ್ಪಣದ ವಿಧಗಳು;
ದರ್ಪಣವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು.ಅವುಗಳೆಂದರೆ;ಸಮತಲ ದರ್ಪಣ ಮತ್ತು ಗೋಳೀಯ ದರ್ಪಣ.ದರ್ಪಣದ ಮೇಲ್ಮೈ ಸಮತಟ್ಟಾಗಿದ್ದರೆ ಅದನ್ನು ಸಮತಲ ದರ್ಪಣ ಎನ್ನುತ್ತೇವೆ.ದರ್ಪಣದ ಮೇಲ್ಮೈ ಗೋಳದ ಭಾಗದಂತಿದ್ದರೆ ಅದನ್ನು ಗೋಳೀಯ ದರ್ಪಣ ಎನ್ನುತ್ತೇವೆ.
ಗೋಳಿಯ ದರ್ಪಣವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು, ಅವುಗಳೆಂದರೆ; ಪೀನ ದರ್ಪಣ ಮತ್ತು ನಿಮ್ನ ದರ್ಪಣ.
ದರ್ಪಣದ ಮೈ ಉಬ್ಬಿದ್ದರೆ ಅದನ್ನು ಪೀನ ದರ್ಪಣ ಎನ್ನುತ್ತೇವೆ.
ದರ್ಪಣದ ಮೈ ತಗ್ಗಾಗಿದ್ದರೆ ಅದನ್ನು ನಿಮ್ನ ದರ್ಪಣ ಎನ್ನುತ್ತೇವೆ.

ಬೆಳಕು ವಸ್ತುವಿನ ಮೇಲೆ ಬಿದ್ದಾಗ ಏನಾಗುತ್ತದೆ?
ಬೆಳಕು ವಸ್ತುವಿನ ಮೇಲೆ ಬಿದ್ದಾಗ ವಸ್ತುವಿನಿಂದ ಹೀರಲ್ಪಡಬಹುದು ಅಥವಾ ವಸ್ತುವಿನ ಮೂಲಕ ಹಾದು ಹೋಗಬಹುದು ಅಥವಾ ಪ್ರತಿಫಲಿಸಬಹುದು.

ಮೈಂಡ್ ಮ್ಯಾಪ್ ಅನ್ನು ಈ ಲೇಖನದೊಂದಿಗೆ ಲಗತ್ತಿಸಲಾಗಿದೆ.

8ನೇ ತರಗತಿ ವಿಜ್ಞಾನ|| ಕಲಿಕಾ ಚೇತರಿಕೆ || ಲೋಹಗಳು ಮತ್ತು ಅಲೋಹಗಳು || ಕಲಿಕಾ ಫಲಗಳು 3

ಕಲಿಕಾ ಫಲ 3   ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವರು ಹಾಗೂ ಆಮ್ಲ ಪ್ರತ್ಯಾಮ್ಲಗಳಲ್ಲಿರುವ ಲೋಹ ಮತ್ತು ಅಲೋಹಗಳನ್ನು ಗುರುತಿಸುವರು.   ಕಲಿಕಾ ...