ಸಸ್ಯಗಳು(plants) ಎಂದರೇನು ?
ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಬಲ್ಲ ಜೀವಿಗಳ ವರ್ಗಕ್ಕೆ ಸಸ್ಯಗಳು ಎನ್ನುತ್ತೇವೆ.
ಸಸ್ಯಗಳನ್ನು ಅವುಗಳ ಕಾಂಡಗಳ ಆಧಾರದ ಮೇಲೆ ನಾಲ್ಕು ಬಗೆಗಳಾಗಿ ವಿಂಗಡಿಸಲಾಗಿದೆ.
ಗಿಡ್ಡಗಿರುವ, ಹಸಿರು ಮೃದು ಕಾಂಡವನ್ನು ಹೊಂದಿರುವ ಸಸ್ಯಗಳಿಗೆ ಗಿಡಮೂಲಿಕೆಗಳು(herbs) ಎನ್ನುತ್ತೇವೆ.
ಮಧ್ಯಮ ಎತ್ತರ, ಸಣ್ಣ, ಗಟ್ಟಿ ಕಾಂಡವನ್ನು ಹೊಂದಿರುವ ಸಸ್ಯಗಳ ಗುಂಪಿಗೆ ಪೊದೆಗಳು(shrubs ) ಎನ್ನುತ್ತೇವೆ.
ಎತ್ತರವಾಗಿರುವ, ದಪ್ಪ, ಗಟ್ಟಿಯಾದ ಕಾಂಡವನ್ನು ಹೊಂದಿರುವ ಸಸ್ಯಗಳಿಗೆ ಮರಗಳು(trees) ಎನ್ನುತ್ತೇವೆ.
ದುರ್ಬಲ, ನೇರವಾಗಿ ನಿಲ್ಲಲಾಗದ, ಉದ್ದನೆಯ ಕಾಂಡವಿರುವ ಸಸ್ಯಗಳನ್ನು ಬಳ್ಳಿಗಳು ಎನ್ನುತ್ತೇವೆ.
ನೆಲದ ಮೇಲೆ ಹರಡುವ ಬಳ್ಳಿಗಳನ್ನು ನೆಲಬಳ್ಳಿಗಳು (creepers) ಎಂದರೆ, ಆಧಾರವನ್ನು ಪಡೆದು ಹತ್ತುವ ಬಳ್ಳಿಗಳನ್ನು ಅಡರು ಬಳ್ಳಿಗಳು(climbers) ಎನ್ನುತ್ತೇವೆ.
ಸಸ್ಯದ ಭಾಗಗಳನ್ನು ಗಮನಿಸೋಣ;
ಸಸ್ಯವು ನಾಲ್ಕು ಪ್ರಮುಖ ಭಾಗಗಳನ್ನು ಒಳಗೊಂಡಿದೆ ಅವುಗಳು; ಎಲೆ, ಬೇರು, ಕಾಂಡ, ಹೂ ಆಗಿವೆ.
ಎಲೆಯು ಎಲೆತೊಟ್ಟು(petiole ) ಮತ್ತು ಪತ್ರಪಟಲ(lamina)ವನ್ನು ಹೊಂದಿದೆ.
ಪತ್ರಪಟಲದಲ್ಲಿರುವ ಗೆರೆಗಳಂತಹ ರಚನೆಗಳನ್ನು ಸಿರೆಗಳು(vein) ಎನ್ನುತ್ತೇವೆ. ಮತ್ತು ಈ ವಿನ್ಯಾಸವನ್ನು ಎಲೆಯ ಸಿರಾ ವಿನ್ಯಾಸ(leaf venation) ಎನ್ನುತ್ತೇವೆ.
ಮಧ್ಯದ ಗೆರೆಯನ್ನು ಮಧ್ಯ ಸಿರೆ(midrib) ಎನ್ನುತ್ತೇವೆ.
ಮಧ್ಯ ಸಿರೆಯ ಎರಡೂ ಕಡೆ ಬಲೆಯ ರೀತಿಯ ವಿನ್ಯಾಸವಿದ್ದರೆ ಅದನ್ನು ಜಾಲಿಕಾ ಸಿರಾ ವಿನ್ಯಾಸ (reticulate venation) ಎನ್ನುತ್ತೇವೆ.
ಮಧ್ಯ ಸಿರೆಯ ಎರಡೂ ಕಡೆ ಸಮಾನಾಂತರವಾಗಿ ಸಿರೆಗಳಿದ್ದರೆ ಅದನ್ನು ಸಮಾನಾಂತರ ಸಿರಾ ವಿನ್ಯಾಸ (parallel venation) ಎನ್ನುತ್ತೇವೆ.
ಬಾಷ್ಪವಿಸರ್ಜನೆ ಎಂದರೇನು? ದ್ಯುತಿಸಂಶ್ಲೇಷಣೆ ಎಂದರೇನು?
ಎಲೆಯು ಎರಡು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವುಗಳೆಂದರೆ;1)ಬಾಷ್ಪವಿಸರ್ಜನೆ(transpiration) ಅಂದರೆ ಸಸ್ಯದಲ್ಲಿರುವ ಹೆಚ್ಚುವರಿ ನೀರು ಪತ್ರಪಟಲದಲ್ಲಿರುವ ಸೂಕ್ಷ್ಮ ರಂಧ್ರಗಳ ಮೂಲಕ ಆವಿಯಾಗುತ್ತದೆ. ಇದನ್ನು ಬಾಷ್ಪವಿಸರ್ಜನೆ ಎನ್ನುತ್ತೇವೆ.
2) ದ್ಯುತಿಸಂಶ್ಲೇಷಣೆ;ಎಲೆಯು ನೀರು, ಸೂರ್ಯನ ಬೆಳಕು, ಕಾರ್ಬನ್ ಡೈಯಾಕ್ಸೈಡ್ ಗಳನ್ನು ಬಳಸಿಕೊಂಡು ಆಹಾರವನ್ನು ತಯಾರಿಸುತ್ತದೆ. ಈ ಪ್ರಕ್ರಿಯೆಯನ್ನು ದ್ಯುತಿಸಂಶ್ಲೇಷಣೆ(photosynthesis) ಎನ್ನುತ್ತೇವೆ.
ಈಗ ಬೇರಿನ ಬಗ್ಗೆ ತಿಳಿಯೋಣ.ಬೇರುಗಳಲ್ಲಿ ತಾಯಿಬೇರು(taproot) ಮತ್ತು ತಂತು ಬೇರು(fibrous roots) ಎಂಬ ಎರಡು ವಿಧಗಳಿವೆ.ತಾಯಿ ಬೇರಿನಲ್ಲಿ ಬದಿಗಳಲ್ಲಿರುವ ಸಣ್ಣ ಬೇರುಗಳನ್ನು ಪಾರ್ಶ್ವ ಬೇರುಗಳು ಎನ್ನುತ್ತೇವೆ.
ತಾಯಿ ಬೇರಿರುವ ಸಸ್ಯಗಳ ಎಲೆಗಳು ಜಾಲಿಕ ಸಿರಾ ವಿನ್ಯಾಸವನ್ನು ಹೊಂದಿರುತ್ತವೆ.
ತಂತು ಬೇರುಗಳನ್ನು ಹೊಂದಿರುವ ಸಸ್ಯಗಳಲ್ಲಿ ಎಲೆಗಳು ಸಮಾನಾಂತರ ಸಿರಾ ವಿನ್ಯಾಸವನ್ನು ಹೊಂದಿರುತ್ತವೆ.
ಕೆಲವೊಂದು ಸಸ್ಯಗಳಲ್ಲಿ ಬೇರುಗಳು ಮಣ್ಣಿನಿಂದ ನೀರು ಮತ್ತು ಖನಿಜಗಳನ್ನು ಹೀರುವುದರ ಜೊತೆಗೆ ಆಹಾರ ಶೇಖರಣೆಯ ಭಾಗವಾಗುತ್ತದೆ.ಸಿಹಿ ಗೆಣಸು,ಮೂಲಂಗಿ, ಕ್ಯಾರೆಟ್ ಗಳು ಇದಕ್ಕೆ ಉದಾಹರಣೆಗಳಾಗಿವೆ.
ಸಸ್ಯಗಳಲ್ಲಿ ಕಾಂಡವು ನೀರು, ಖನಿಜ, ಆಹಾರಗಳನ್ನು ಸಾಗಿಸುವ ಅಂಗಾಂಶಗಳನ್ನು ಹೊಂದಿದೆ.
ಸಸ್ಯಗಳಲ್ಲಿ ಹೂವು ಸಂತಾನೋತ್ಪತ್ತಿಯ ಭಾಗವಾಗಿದೆ.ಹೂ, ಪುಷ್ಪಪತ್ರ, ಪುಷ್ಪದಳಗಳು, ಶಲಾಕೆ, ಕೇಸರಗಳನ್ನು ಹೊಂದಿದೆ.