ಶನಿವಾರ, ಆಗಸ್ಟ್ 27, 2022

8ನೇ ತರಗತಿ ವಿಜ್ಞಾನ|| ಕಲಿಕಾ ಚೇತರಿಕೆ || ಲೋಹಗಳು ಮತ್ತು ಅಲೋಹಗಳು || ಕಲಿಕಾ ಫಲಗಳು 3

ಕಲಿಕಾ ಫಲ 3 
 ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವರು ಹಾಗೂ ಆಮ್ಲ ಪ್ರತ್ಯಾಮ್ಲಗಳಲ್ಲಿರುವ ಲೋಹ ಮತ್ತು ಅಲೋಹಗಳನ್ನು ಗುರುತಿಸುವರು. 
 ಕಲಿಕಾ ಹಾಳೆ 3 
  ಚಟುವಟಿಕೆ 1:ಆಮ್ಲ ಮತ್ತು ಪ್ರತ್ಯಾಮ್ಲಗಳಲ್ಲಿನ ಲೋಹಗಳು ಮತ್ತು ಅಲೋಹಗಳನ್ನು ಹೆಸರಿಸಿ:
ಚಟುವಟಿಕೆ 2:ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾದ ಪ್ರಯೋಗವನ್ನು ಕೈಗೊಂಡು ತೀರ್ಮಾನವನ್ನು ವ್ಯಕ್ತಪಡಿಸಿ :
ತೀರ್ಮಾನ:

ಲೋಹಗಳು ಆಮ್ಲಗಳೊಂದಿಗೆ ವರ್ತಿಸಿ ಆಯಾಲೋಹದ ಲವಣ ಮತ್ತು ಹೈಡ್ರೋಜನ್ ಅನಿಲವನ್ನು ಉಂಟುಮಾಡುತ್ತದೆ.

ಅಲೋಹಗಳು ಆಮ್ಲಗಳೊಂದಿಗೆ ವರ್ತಿಸಿ ಆಯಾಲೋಹದ ಲವಣ ಮತ್ತು ಹೈಡ್ರೋಜನ್ ಗಳನ್ನು ಉತ್ಪತ್ತಿ ಮಾಡುತ್ತದೆ.

ಸಸ್ಯಗಳಲ್ಲಿ ಮೆಗ್ನೀಷಿಯಂ ಕಂಡುಬರುತ್ತದೆ ಎಂದು ಕೇಳಿದ್ದೇನೆ.ಅದು ಅವುಗಳಲ್ಲಿ ಯಾವ ರೂಪದಲ್ಲಿ ಕಂಡು ಬರುತ್ತದೆ?

ಸಸ್ಯಗಳಲ್ಲಿ ಮೆಗ್ನೀಷಿಯಂ ಪತ್ರಹರಿತಿನಲ್ಲಿದ್ದು ಡೈವ್ಯಾಲೆಂಟ್ ರೂಪದಲ್ಲಿರುತ್ತದೆ. ವೈದ್ಯರು ನನಗೆ ಕಬ್ಬಿಣಾಂಶದ ಕೊರತೆ ಇದೆ ಎಂದು ಹೇಳಿದ್ದಾರೆ.ನನ್ನ ದೇಹದಲ್ಲಿ ಕಬ್ಬಿಣ ಎಲ್ಲಿದೆ?

ನಮ್ಮ ದೇಹದಲ್ಲಿ ಕಬ್ಬಿಣಾಂಶವು ರಕ್ತದ ಕೆಂಪು ರಕ್ತ ಕಣಗಳಲ್ಲಿನ ಹಿಮೋಗ್ಲೋಬಿನ್ ನಲ್ಲಿದೆ ಮತ್ತು ಸ್ನಾಯುಕೋಶಗಳಲ್ಲಿನ ಮೈಯೋಗ್ಲೋಬಿನ್ ನಲಿದೆ.

ಚಟುವಟಿಕೆ 3:ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾದ ಪ್ರಯೋಗವನ್ನು ಕೈಗೊಂಡು ತೀರ್ಮಾನವನ್ನು ವ್ಯಕ್ತಪಡಿಸಿ.

; 100 ಎಂಎಲ್ 5 ಬೀಕರ್ಗಳನ್ನು ತೆಗೆದುಕೊಳ್ಳಿ ಮತ್ತು ಅವುಗಳ ಮೇಲೆ ಎ ಬಿ ಸಿ ಡಿ ಮತ್ತು ಇ ಗಳೆಂದು ನಮೂದಿಸಿ.ಪ್ರತಿ ಭೀಕರ ನಲ್ಲಿ 50 ಎಮ್ಎಲ್ ನಷ್ಟು ನೀರನ್ನು ತೆಗೆದುಕೊಳ್ಳಿ.ಪ್ರತಿಯೊಂದು ಭೀಕರ ನಲ್ಲೂ ಕೊಟ್ಟಿರುವ ಪ್ರತಿಯೊಂದು ವಸ್ತುವನ್ನು ಒಂದು ಚಮಚೆಯಷ್ಟು ಅನುಕ್ರಮವಾಗಿ ವಿಲೀನಗೊಳಿಸಿ.
ತೀರ್ಮಾನ:

ಹೆಚ್ಚು ಕ್ರಿಯಾಶೀಲ ಲೋಹಗಳು ಕಡಿಮೆ ಕ್ರಿಯಾಶೀಲ ಲೋಹಗಳನ್ನು ಸ್ಥಳಾಂತರಿಸುತ್ತವೆ.ಆದರೆ ಕಡಿಮೆ ಕ್ರಿಯಾಶೀಲ ಲೋಹಗಳು ಹೆಚ್ಚು ಕ್ರಿಯಾಶೀಲ ಲೋಹಗಳನ್ನು ಸ್ಥಳಾಂತರಿಸಲಾರವು.

ನನ್ನ ತಿಳುವಳಿಕೆಯನ್ನು ನಾನೇ ಪರಿಶೀಲಿಸಿಕೊಳ್ಳುವೆ.

1.ಸೋಡಿಯಂ ಮತ್ತು ಪೊಟ್ಯಾಶಿಯಂ ಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ.ಏಕೆ?

ಸೋಡಿಯಂ ಮತ್ತು ಪೊಟ್ಯಾಶಿಯಂ ಗಳು ಕ್ರಿಯಾಶೀಲ ಧಾತುಗಳಾಗಿದ್ದು ಗಾಳಿಯಲ್ಲಿರುವ ಆಕ್ಸಿಜನ್ ನೊಂದಿಗೆ ಪ್ರತಿಕ್ರೀಯಿಸುತ್ತವೆ.ಆದ್ದರಿಂದ ಸೋಡಿಯಂ ಮತ್ತು ಪೊಟ್ಯಾಶಿಯಂ ಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ

2.ನಿಂಬೆಹಣ್ಣಿನ ಉಪ್ಪಿನಕಾಯಿಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಸಂಗ್ರಹಿಸಿಡಬಹುದೇ?ವಿವರಿಸಿ.

ನಿಂಬೆ ಉಪ್ಪಿನಕಾಯಿಯನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಇರಿಸಿದರೆ, ಸಿಟ್ರಿಕ್ ಆಮ್ಲವು ಅಲ್ಯೂಮಿನಿಯಂನೊಂದಿಗೆ ಪ್ರತಿಕ್ರಿಯಿಸಿ ಉಪ್ಪನ್ನು ರೂಪಿಸುತ್ತದೆ ಮತ್ತು ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಹೈಡ್ರೋಜನ್ ಬಿಡುಗಡೆಯು ಉಪ್ಪಿನಕಾಯಿಯನ್ನು ಹಾಳುಮಾಡುತ್ತದೆ ಮತ್ತು ಅದು ಇನ್ನು ಮುಂದೆ ತಿನ್ನಲು ಯೋಗ್ಯವಾಗಿರುವುದಿಲ್ಲ. ಆದ್ದರಿಂದ, ಅಲ್ಯೂಮಿನಿಯಂ ಪಾತ್ರೆಯಲ್ಲಿ ನಿಂಬೆ ಉಪ್ಪಿನಕಾಯಿಯನ್ನು ಸಂಗ್ರಹಿಸದಿರುವುದು ಒಳ್ಳೆಯದು.

ಲೋಹದ ಯಾವ ಗುಣವೂ ಚಾಕ್ಲೆಟ್ ಹಾಳೆಯ ಬಳಕೆಗೆ ಯೋಗ್ಯವಾಗಿದೆ?

ಲೋಹವು ಕಠಿಣವಾಗಿದ್ದು,ಗಾಳಿ ಬೆಳಕು ಮತ್ತು ತೇವಾಂಶದಿಂದ ಚಾಕಲೇಟ್ ಗೆ ರಕ್ಷಣೆಯನ್ನು ಒದಗಿಸುತ್ತದೆ.

4.ಈ ಕೆಳಗಿನ ಅಲೋಹ ಹಾಗೂ ಅವುಗಳ ಬಳಕೆಯನ್ನು ಹೊಂದಿಸಿ ಬರೆಯಿರಿ.
ಯಾವ ಅಲೋಹವು ಗಾಳಿಯೊಂದಿಗೆ ವರ್ತಿಸಿ ಬೆಂಕಿ ಉತ್ಪತ್ತಿ ಮಾಡುತ್ತದೆ? 
   ರಂಜಕವು ಗಾಳಿಯೊಂದಿಗೆ ವರ್ತಿಸಿ ಬೆಂಕಿ ಉತ್ಪತ್ತಿ ಮಾಡುವ ಅಲೋಹವಾಗಿದೆ.

ಶನಿವಾರ, ಆಗಸ್ಟ್ 20, 2022

8ನೇ ತರಗತಿ ಗಣಿತ ಭಾಗ 2 ಅಭ್ಯಾಸ 6.1

ಈ ವೀಡಿಯೋದಲ್ಲಿ 8ನೇ ತರಗತಿ ಗಣಿತ ಭಾಗ-2 ರ ಅಭ್ಯಾಸ 6.1 ರಲ್ಲಿನ 3 ನೇ ಮುಖ್ಯ ಪ್ರಶ್ನೆ ಅಪವರ್ತಿಸಿ. ಯ 5 ಉಪ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ವೀಕ್ಷಣೆಗೆ ಧನ್ಯವಾದಗಳು.

ಶುಕ್ರವಾರ, ಆಗಸ್ಟ್ 19, 2022

ನಮ್ಮ ಸೌರವ್ಯೂಹ

ಈ ಮೈಂಡ್ ಮ್ಯಾಪ್ ಅನ್ನು click ಮಾಡಿ ಜೂಮ್ ಮಾಡಿ ನೋಡಿ. ಸೌರವ್ಯೂಹವು ಸೂರ್ಯನನ್ನು ಒಳಗೊಂಡಂತೆ ಸಾವಿರಾರು ಆಕಾಶ ಕಾಯಗಳ ಒಂದು ವ್ಯವಸ್ಥಿತ ಅಸ್ತಿತ್ವವಾಗಿದೆ. ಸೌರವ್ಯೂಹದ ಕೇಂದ್ರ ಬಿಂದು ಸೂರ್ಯ ಆಗಿದೆ.ಸೌರವ್ಯೂಹದ ಶೇಕಡಾ 99 ರಷ್ಟು ದ್ರವ್ಯರಾಶಿಯನ್ನು ಸೂರ್ಯನು ಹೊಂದಿದ್ದಾನೆ.ಸೂರ್ಯ ಒಂದು ನಕ್ಷತ್ರವಾಗಿದ್ದು ಸೌರವ್ಯೂಹದ ಕೇಂದ್ರದಲ್ಲಿದೆ.ಸೂರ್ಯನ ಗುರುತ್ವಾಕರ್ಷಣ ಬಲ ಸೌರವ್ಯೂಹದ ಎಲ್ಲವನ್ನು ಸೆಳೆಯುತ್ತಿದೆ.ಸೂರ್ಯನ ಸುತ್ತ ಎಂಟು ಗ್ರಹಗಳು ವಿವಿಧ ಕಕ್ಷೆಗಳಲ್ಲಿ ಸುತ್ತುತ್ತಿವೆ.ಕಕ್ಷೆ ಎಂದರೆ ಆಕಾಶಕಾಯಗಳು ನಕ್ಷತ್ರ, ಗ್ರಹ ,ಚಂದ್ರಗಳ ಸುತ್ತ ಸುತ್ತುವ ವಕ್ರ ಪಥವಾಗಿದೆ. ಸೂರ್ಯನ ಸುತ್ತುವ ಎಂಟು ಗ್ರಹಗಳನ್ನು ಮೂರು ಗುಂಪುಗಳಾಗಿ ವರ್ಗಿಕರಿಸಬಹುದು.ಅವುಗಳೆಂದರೆ ಶಿಲಾಗ್ರಹಗಳು,ಅನಿಲ ದೈತ್ಯಗಳು,ಹಿಮ ದೈತ್ಯಗಳು. ಬುಧ ಶುಕ್ರ ಭೂಮಿ ಮಂಗಳ ಇವು ಶಿಲಾ ಗ್ರಹಗಳು. ಏಕೆಂದರೆ ಇವು ಪ್ರಧಾನವಾಗಿ ಬಂಡೆಗಳು ಮತ್ತು ಲೋಹಗಳಿಂದ ಮಾಡಲ್ಪಟ್ಟಿದೆ. ಗುರು ಮತ್ತು ಶನಿ ಗ್ರಹಗಳನ್ನು ಅನಿಲ ದೈತ್ಯಗಳು ಎನ್ನುತ್ತೇವೆ.ಏಕೆಂದರೆ ಇವು ಬಹುಪಾಲು ಅನಿಲಗಳಿಂದ ಮಾಡಲ್ಪಟ್ಟಿವೆ. ಯುರೇನಸ್ ಮತ್ತು ನೆಪ್ಟ್ಯೂನ್ ಗಳನ್ನು ಹಿಮದೈತ್ಯಗಳು ಎನ್ನುತ್ತೇವೆ ಏಕೆಂದರೆ ಇವುಗಳು ಹಿಮದಿಂದಾದ ಕೇಂದ್ರವನ್ನು ಹೊಂದಿವೆ. ಈಗ ನಾವು ಸೂರ್ಯನನ್ನು ಸುತ್ತುವ ಎಂಟು ಗ್ರಹಗಳ ಲಕ್ಷಣಗಳನ್ನು ಒಂದೊಂದಾಗಿ ಗಮನಿಸೋಣ. ಆ ಎಂಟು ಗ್ರಹಗಳು ಯಾವುವೆಂದರೆ ಸೂರ್ಯನಿಂದ ಅವುಗಳಿಗೆ ಇರುವ ದೂರದ ಅನುಕ್ರಮದಲ್ಲಿ ಬುಧ ಶುಕ್ರ ಭೂಮಿ ಮಂಗಳ ಗುರು ಶನಿ ಯುರೇನಸ್ ನೆಪ್ಟ್ಯೂನ್. ಮೊದಲಿಗೆ ಬುಧ ಗ್ರಹದ ಕೆಲವು ಲಕ್ಷಣಗಳನ್ನು ತಿಳಿಯೋಣ ;ಇದು ಸೌರವ್ಯೂಹದ ಅತಿ ಚಿಕ್ಕ ಗ್ರಹ.ಇದು ಸೂರ್ಯನಿಗೆ ಅತಿ ಹತ್ತಿರದ ಗ್ರಹವಾಗಿದೆ.ಇತರ ಕೇಂದ್ರದಲ್ಲಿ ಘನ ಕಬ್ಬಿಣವಿದೆ.ಇದರ ಪರಿಬ್ರಮಣಾವಧಿಯು 88 ದಿನಗಳಾಗಿದೆ. ಈಗ ಶುಕ್ರ ಗ್ರಹದ ಬಗೆಗಿನ ಕೆಲವು ಅಂಶಗಳನ್ನು ನೋಡೋಣ;ಶುಕ್ರ ಇದು ಅತಿ ಹೆಚ್ಚಿನ ತಾಪವನ್ನು ಹೊಂದಿರುವ ಗ್ರಹ.ಇದು ಭೂಮಿಗೆ ಅತ್ಯಂತ ಸಮೀಪವಿರುವ ಗ್ರಹವಾಗಿದೆ.ಇದು ಗಡಿಯಾರದ ದಿಕ್ಕಿನಲ್ಲಿ ಸೂರ್ಯನನ್ನು ಸುತ್ತುತ್ತದೆ.ಇದು ದಪ್ಪನೆಯ ವಾತಾವರಣದ ಹೊದಿಕೆಯನ್ನು ಹೊಂದಿದೆ. ಭೂಮಿಯು ಜೀವಕ್ಕೆ ಪ್ರೋತ್ಸಾಹ ನೀಡುವ ಗ್ರಹವಾಗಿದೆ.ಇದರ ಬಹುಪಾಲು ನೀರಿನಿಂದ ಆವೃತಗೊಂಡಿದೆ.ಭೂಕೇಂದ್ರವು ನಿಕಲ್ ಮತ್ತು ಕಬ್ಬಿಣದಿಂದ ಆಗಿದೆ.ಭೂಮಿಯ ಪರಿಭ್ರಮಣ ಅವಧಿಯು 365 ದಿನಗಳಾಗಿದೆ. ಮಂಗಳವು ಕೆಂಪು ಗ್ರಹ ಎಂದು ಕರೆಯಲ್ಪಡುತ್ತದೆ.ಇದರ ಮಣ್ಣಿನಲ್ಲಿ ಕಬ್ಬಿಣದ ಆಕ್ಸೈಡ್ ಇದೆ.ಭೂಮಿಯಂತೆ ಇದರ ಕೇಂದ್ರವೂ ಕೂಡ ನಿಕ್ಕಲ್ ಮತ್ತು ಕಬ್ಬಿಣದಿಂದ ಆಗಿದೆ.ಮಂಗಳ ಗ್ರಹದಲ್ಲಿ ದ್ರವರೂಪದ ನೀರು ಮತ್ತು ವಾತಾವರಣ ಇದೆ.ಇದರ ಪರಿಭ್ರಮಣ ಅವಧಿ 687 ದಿನಗಳಾಗಿದೆ. ಗುರು ಗ್ರಹವು ಸೌರವ್ಯೂಹದ ಅತಿ ದೊಡ್ಡ ಗ್ರಹವಾಗಿದೆ.ಇದರ ದ್ರವ್ಯರಾಶಿ ಎಷ್ಟಿದೆ ಅಂದರೆ ಇತರ ಎಲ್ಲಾ ಗ್ರಹಗಳ ದ್ರವ್ಯರಾಶಿಯ ಎರಡು ಪಟ್ಟು ದ್ರವ್ಯರಾಶಿಯನ್ನು ಹೊಂದಿದೆ.ಇದು ಬಹುಪಾಲು ಹೀಲಿಯಂ ಮತ್ತು ಹೈಡ್ರೋಜನ್ ಅನಿಲಗಳಿಂದ ಆಗಿದೆ.ಆದ್ದರಿಂದ ಇದನ್ನು ಅನಿಲ ದೈತ್ಯ ಎನ್ನುತ್ತೇವೆ.ಇದು ಅತಿ ವೇಗವಾಗಿ ಪರಿಭ್ರಮಿಸುವ ಗ್ರಹವಾಗಿದೆ. ಶನಿ ಗ್ರಹವು ಸೌರವ್ಯೂಹದ ಅನಿಲ ದೈತ್ಯಗಳಲ್ಲೊಂದು.ಇದು ಕೂಡ ಹೈಡ್ರೋಜನ್ ಮತ್ತು ಹೀಲಿಯಂಗಳಿಂದಾಗಿದೆ.ಇದಕ್ಕೆ ಉಂಗುರ ವ್ಯವಸ್ಥೆ ಇದೆ.ಈ ಉಂಗುರಗಳುಬಂಡೆಗಳು ದೂಳು ಮತ್ತು ಹಿಮದಿಂದ ಕೂಡಿವೆ.ಇದು ಬಿರುಗಾಳಿಯ ವಾತಾವರಣವನ್ನು ಹೊಂದಿದೆ. ಈಗ ನಾವು ಸೌರವ್ಯೂಹದ ಹಿಮ ದೈತ್ಯಗಳಾದ ಯುರೇನಸ್ ಮತ್ತು ನೆಪ್ಟ್ಯೂನ್ ಗ್ರಹಗಳ ಬಗ್ಗೆ ತಿಳಿಯೋಣ.ಇವುಗಳು ಭಾರವಾದ ಅನಿಲಗಳಾದ ಆಕ್ಸಿಜನ್ ನೈಟ್ರೋಜನ್ ಮತ್ತು ಕಾರ್ಬನ್ ಸಲ್ಪರ್ ಗಳಿಂದ ಕೂಡಿದೆ.ಇವುಗಳಲ್ಲಿ ಮೀಥೇನ್ ಮೋಡಗಳಿವೆ.ಮೀಥೇನ್ನ್ ಕೆಂಪು ಬಣ್ಣವನ್ನು ಹೀರಿಕೊಂಡು ನೀಲಿ ಬಣ್ಣವನ್ನು ಪ್ರತಿಫಲಿಸುತ್ತವೆ. ನೆಪ್ಚೂನ್ ಗ್ರಹವು ಸೂರ್ಯನಿಂದ ಅತಿ ಹೆಚ್ಚು ದೂರದಲ್ಲಿದೆ.

ಬುಧವಾರ, ಆಗಸ್ಟ್ 17, 2022

ಗ್ರಾಫೈಟ್ ನ ಲಕ್ಷಣಗಳು ಮತ್ತು ಉಪಯೋಗಗಳು

  
ಗ್ರಾಫೈಟ್ ನ ಲಕ್ಷಣಗಳು;
       ಗ್ರಾಫೈಟ್  ಕಾರ್ಬನ್ನಿನ ಬಹುರೂಪವಾಗಿದೆ.
ಗ್ರಾಫೈಟ್ ಹೊಳೆಯುತ್ತದೆ.
ಗ್ರಾಫೈಟ್ ನಲ್ಲಿ ಪರಮಾಣುಗಳು ಪದರುಗಳಾಗಿ ಜೋಡಣೆಗೆ ಒಳಪಟ್ಟಿದ್ದು ಮೃದುವಾದ ವಸ್ತುವಾಗಿದೆ.
ಗ್ರಾಫೈಟ್ ವು ತಾಪ ಮತ್ತು ವಿದ್ಯುತ್ನ ಉತ್ತಮ ವಾಹಕವಾಗಿದೆ.
ಗ್ರಾಫೈಟ್ ರಾಸಾಯನಿಕವಾಗಿ ಜಡ ವಸ್ತುವಾಗಿದೆ.

ಗ್ರಾಫೈಟ್ ನ ಉಪಯೋಗಗಳು;
ಗ್ರಾಫೈಟ್ ಅನ್ನು ಪೆನ್ಸಿಲ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಗ್ರಾಫೈಟ್ ಅನ್ನು ಲೂಬ್ರಿಕೆಂಟ್ ಆಗಿ ಉಪಯೋಗಿಸುತ್ತಾರೆ.
ಗ್ರಾಫೈಟ್ ಅನ್ನು ಉಷ್ಣ ನಿರೋಧಕ ಮೂಸೆಗಳಲ್ಲಿ ಉಪಯೋಗಿಸುತ್ತಾರೆ.
ಗ್ರಾಫೈಟ್ ಅನ್ನು ವಿದ್ಯುದಾಗರ ಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಅನ್ನು ಬೈಜಿಕ ಸ್ಥಾವರಗಳಲ್ಲಿ ಮಂದಕವಾಗಿ ಬಳಸುತ್ತಾರೆ.

ಗುರುವಾರ, ಜುಲೈ 21, 2022

6ನೇ ತರಗತಿ ವಿಜ್ಞಾನ ಘಟಕ ಪರೀಕ್ಷೆ ಪ್ರಶ್ನೆಗಳು

I. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1. ಹುಲಿಯು ಒಂದು _______________

     a)ಸಸ್ಯಹಾರಿ    b)ಮಿಶ್ರಹಾರ   c)ಮಾಂಸಹಾರಿ

2.ಇವುಗಳಲ್ಲಿ ಶಕ್ತಿ ನೀಡುವ ಪೋಷಕಾಂಶ ______________

  a)ಪ್ರೋಟೀನ್  b)ಕೊಬ್ಬು    c)ವಿಟಮಿನ್

3.ಇವುಗಳಲ್ಲಿ ನೈಸರ್ಗಿಕ ನಾರು  ____________

   a)ಸೆಣಬು    b)ನೈಲಾನ್     c) ಪಾಲಿಯೆಸ್ಟರ್

4.ಇವುಗಳಲ್ಲಿ ಸಸ್ಯದ ಕಾಂಡದಿಂದ ಪಡೆಯುವ ನಾರು :__________

   a) ರೇಷ್ಮೆ         b)ಹತ್ತಿ            c) ಸೆಣಬು

5.ಇವುಗಳಲ್ಲಿ ಬಟ್ಟೆಯನ್ನು ತಯಾರಿಸದ ಕ್ರಿಯೆ ___________ 

   a)ನೂಲುವುದು  b)ಹೆಣೆಯುವುದು c)ನೇಯುವುದು


II. 1ನೇ ಪಟ್ಟಿಯಲ್ಲಿರುವ  ವಸ್ತುಗಳನ್ನು 2ನೇ ಪಟ್ಟಿಯಲ್ಲಿರುವ ಅವುಗಳ ಮೂಲದೊಂದಿಗೆ ಹೊಂದಿಸಿ ಬರೆಯಿರಿ.

1. ಚಪಾತಿ                      --- ಕಡ್ಲೆಕಾಳು

2. ಸಕ್ಕರೆ                        --- ತೆಂಗಿನ ನಾರು

3.ಪ್ರೋಟೀನ್                 --- ಹಿಟ್ಟು, ನೀರು

4.ಕಾರ್ಬೋಹೈಡ್ರೇಟ್        --- ನೇಯುವುದು

5. ಹಗ್ಗ                           --- ಕಬ್ಬು

                                     --- ಅಕ್ಕಿ

III.ಮೊದಲ ಜೋಡಿಯ ಸಂಬಂಧ  ಅರಿತು ಎರಡನೇ ಜೋಡಿಯನ್ನು ಪೂರ್ಣಗೊಳಿಸಿ

1. ಹಾಲು : ಪ್ರಾಣಿಜನ್ಯ : : ಕ್ಯಾರೆಟ್ :_________

2. ಅಯೋಡಿನ್ ದ್ರಾವಣ :ಪಿಷ್ಟದ ಪರೀಕ್ಷೆ : : ತಾಮ್ರದ ಸಲ್ಪೇಟ್ ದ್ರಾವಣ :__________

3.ವಿಟಮಿನ್ ಸಿ : ಸ್ಕರ್ವಿ : : ವಿಟಮಿನ್ ಡಿ :_________

4.ನೂಲುವುದು : ನೂಲು : : ನೇಯುವುದು :_________

IV.ಕೆಳಗಿನವುಗಳಿಗೆ ಕಿರು ಉತ್ತರ ನೀಡಿ.

1.ತೆಂಗಿನ ನಾರಿನಿಂದ ತಯಾರಿಸುವ ವಸ್ತುವೊಂದನ್ನು ತಿಳಿಸಿ.

2.ಸಸ್ಯಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಏನೆನ್ನುವರು ?

3.ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಅಗತ್ಯವಿರುವ ಖನಿಜ ಯಾವುದು?

4.ಸಂಶ್ಲೇಷಿತ ನಾರಿಗೆ ಒಂದು ಉದಾಹರಣೆ ಕೊಡಿ.


V.ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.

1.ಪ್ರಾಣಿಯ ನಾರುಗಳು _________ ಮತ್ತು _________

2.ನಮ್ಮ ಆಹಾರದಲ್ಲಿ ____________ ನ ಕೊರತೆಯಿಂದ ಇರುಳು ಕುರುಡುತನ ಉಂಟಾಗುತ್ತದೆ.

3.ಬೆರಿಬೆರಿ ರೋಗವು ____________ ನ ಕೊರತೆಯಿಂದ ಉಂಟಾಗುತ್ತದೆ.

4.ಜಿಂಕೆಯು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ.ಆದ್ದರಿಂದ ಇದು __________


VI.ಈ ಕೆಳಗಿನವುಗಳಿಗೆ ಸೂಕ್ತವಾದ ಒಂದು ಪದ ನೀಡಿ.

1.ಕಾರ್ಬೋಹೈಡ್ರೇಟ್ಗಳು,ಪ್ರೋಟೀನ್ ಗಳು,ಕೊಬ್ಬು,ವಿಟಮಿನ್ ಗಳು,ಮತ್ತು ಖನಿಜಗಳು;_______________

2.ಎಲ್ಲಾ ಪೋಷಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಹೊಂದಿರುವ ಆಹಾರ :______________

3.ಹತ್ತಿಯಿಂದ ಬೀಜವನ್ನು ಬೇರ್ಪಡಿಸುವ ಕ್ರಿಯೆ :_____________

4.ಪ್ರಾಣಿಗಳನ್ನು ಮಾತ್ರ ತಿನ್ನುವ ಪ್ರಾಣಿಗಳು :______________

VII.ಈ ಕೆಳಗಿನವುಗಳಿಗೆ ಗೆರೆ ಹಾಕಿರುವ ಪದಗಳನ್ನು ತಿದ್ದಿ ಸರಿಯಾದ ಹೇಳಿಕೆ ರಚಿಸಿ.

1.ಗಿಳಿಯು ಪ್ರಾಣಿ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ.

2.ಎಲ್ಲ ಜೀವಿಗಳಿಗೂ ಒಂದೇ ತರಹದ ಆಹಾರವು ಅವಶ್ಯ.

3.ದೇಹಕ್ಕೆ ಎಲ್ಲಾ ಪೋಷಕಗಳನ್ನು ಒದಗಿಸಲು ಮಾಂಸ ಮಾತ್ರ ಸಾಕು.

4.ಪಾಲಿಯೆಸ್ಟರ್ ಒಂದು ನೈಸರ್ಗಿಕ ನಾರು.


7 ನೇ ತರಗತಿ ವಿಜ್ಞಾನ ಘಟಕ ಪರೀಕ್ಷಾ ಪ್ರಶ್ನೆಗಳು

I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1.ಕೀಟಗಳನ್ನು ಹಿಡಿಯುವ ಮತ್ತು ತಿನ್ನುವ ಸಸ್ಯ.

   a)ಕಸ್ಕ್ಯೂಟ          b)ದಾಸವಾಳ           c)ಹೂಜಿಗಿಡ            d)ಗುಲಾಬಿ

2. ದ್ಯುತಿಸಂಶ್ಲೇಷಣೆಗಾಗಿ ವಾತಾವರಣದಿಂದ ಕಾರ್ಬನ್ ಡೈಯಾಕ್ಸೈಡ್ ಒಳತೆಗೆದುಕೊಳ್ಳುವ ಸಸ್ಯದ ಭಾಗ.

   a)ಬೇರು ರೋಮ       b)ಪತ್ರ ರಂಧ್ರಗಳು         c)ಎಲೆಯ ಸಿರೆಗಳು        d)ದಳಗಳು

3.ದ್ಯುತಿಸಂಶ್ಲೇಷಣೆಯಲ್ಲಿ ಸೌರ ಶಕ್ತಿಯು ಈ ಶಕ್ತಿಯಾಗಿ ಪರಿವರ್ತಿಸಲ್ಪಡುತ್ತದೆ.

   a)ಕಾಂತಶಕ್ತಿ       b)ರಾಸಾಯನಿಕ ಶಕ್ತಿ         c)ವಿದ್ಯುತ್ ಶಕ್ತಿ       d)ಯಾಂತ್ರಿಕ ಶಕ್ತಿ.

4.ಕೊಬ್ಬು ಸಂಪೂರ್ಣವಾಗಿ ಇಲ್ಲಿ ಜೀರ್ಣಗೊಳ್ಳುತ್ತದೆ.

    a)ಜಠರ           b)ಬಾಯಿ            c)ಸಣ್ಣ ಕರುಳು                 d)ದೊಡ್ಡ ಕರುಳು

5.ಜೀರ್ಣಗೊಳ್ಳದ ಆಹಾರದಿಂದ ನೀರು ಮುಖ್ಯವಾಗಿ ಇಲ್ಲಿ ಹೀರಲ್ಪಡುತ್ತದೆ.

  a)ಜಠರ              b)ಅನ್ನನಾಳ            c)ಸಣ್ಣ ಕರುಳು                 d)ದೊಡ್ಡ ಕರುಳು

II.ಒಂದನೇ ಪಟ್ಟಿಯಲ್ಲಿರುವ ಅಂಶಗಳನ್ನು ಎರಡನೇ ಪಟ್ಟಿಯಲ್ಲಿರುವ ಉದಾಹರಣೆಗಳೊಂದಿಗೆ ಹೊಂದಿಸಿ ಬರೆಯಿರಿ.

1.ಸ್ವಪೋಷಕಗಳು      --- ಹೂಜಿ ಗಿಡ

2.ಕೀಟಹಾರಿ ಸಸ್ಯಗಳು --- ಹುಲಿ

3.ಕೊಳೆತಿನಿಗಳು         --- ಕಸ್ಕ್ಯೂಟ

4. ಪರಾವಲಂಬಿಗಳು   --- ಹಸಿರು ಸಸ್ಯಗಳು

5.ಮಾಂಸಾಹಾರಿಗಳು   --- ಶಿಲೀಂದ್ರಗಳು

III.ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.

1.ಸಸ್ಯಗಳಿಂದ ಸಂಶೇಷಿಸಲ್ಪಟ್ಟ ಆಹಾರವು _____________ ರೂಪದಲ್ಲಿ ಸಂಗ್ರಹವಾಗುವುದು.

2. ದ್ಯುತಿ ಸಂಶ್ಲೇಷಣೆಯಲ್ಲಿ ಸೌರ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ವರ್ಣಕ _____________.

3.ಮನುಷ್ಯನ ದೇಹದಲ್ಲಿ ಅತ್ಯಂತ ದೊಡ್ಡ ಗ್ರಂಥಿ ___________.

4.ಅಮೀಬಾವು ತನ್ನ ಆಹಾರವನ್ನು _______________ ಯಲ್ಲಿ ಜೀರ್ಣಿಸುತ್ತದೆ.

IV.ಒಂದು ಜೋಡಿಯ ಸಂಬಂಧ ಅರಿತು ಇನ್ನೊಂದು ಜೋಡಿಯನ್ನು ಪೂರ್ಣಗೊಳಿಸಿ.

1.ಲಾಲಾ ರಸ ಸ್ರವಿಕೆ : ಲಾಲಾ ರಸ ಗ್ರಂಥಿ : : ಪಿತ್ತರಸ ಸ್ರವಿಕೆ : _____________

2.ಕೊಬ್ಬು : _________________ : : ಪ್ರೋಟೀನ್ : ಅಮೈನೋ ಆಮ್ಲ

3.ಆಹಾರ ಹೀರಿಕೆ : ಸಣ್ಣ ಕರುಳು : : ಬ್ಯಾಕ್ಟೀರಿಯಾ ಗಳನ್ನು ಕೊಲ್ಲುವುದು : ____________

4._____________ : ಕಸ್ಕ್ಯೂಟ : : ಕೀಟಹಾರಿ ಸಸ್ಯ : ಹೂಜಿ ಗಿಡ


V.ಇವುಗಳನ್ನು ಸೂಚಿಸುವ ಸೂಕ್ತವಾದ ಒಂದು ಪದ ನೀಡಿ.

1.ಕಾರ್ಬೋಹೈಡ್ರೇಟ್ ಪ್ರೋಟೀನ್ ಕೊಬ್ಬು ವಿಟಮಿನ್ ಮತ್ತು ಖನಿಜಗಳು ; ________________

2.ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಸಸ್ಯಗಳು;_____________

3.ಬಾಯಿಯ ಕುಹರ,ಅನ್ನನಾಳ,ಜಠರ,ಸಣ್ಣ ಕರುಳು,ದೊಡ್ಡ ಕರುಳು, ಗುದನಾಳ ; ________________

4.ಆಹಾರ ಸೇವನೆ, ಜೀರ್ಣಕ್ರಿಯೆ,ಹೀರಿಕೆ, ಸ್ವಾಂಗೀಕರಣ, ವಿಸರ್ಜನೆ; _____________

VI.ಈ ಕೆಳಗಿನವುಗಳನ್ನು ಹೆಸರಿಸಿ.

1. ದ್ಯುತಿ ಸಂಶ್ಲೇಷಣೆಯಲ್ಲಿ ಬಿಡುಗಡೆಯಾಗುವ ಅನಿಲ.

2.ಎಲೆಗಳು ಅನಿಲ ವಿನಿಮಯ ನಡೆಸುವ ರಂದ್ರಗಳು.

3.ಸಸ್ಯಗಳು ಆಹಾರ ತಯಾರಿಸುವ ಕ್ರಿಯೆ.

4.ಸಣ್ಣ ಕರುಳಿನ ಒಳಬಿತ್ತಿಯಲ್ಲಿರುವ ಹಲವಾರು ಬೆರಳಿನಂತಹ ರಚನೆಗಳು.

VII.ಈ ಕೆಳಗಿನವುಗಳಿಗೆ ಕಿರು ಉತ್ತರ ನೀಡಿ.

1.ಯಾವುದನ್ನು ಸೇವಿಸಿದರೆ ನಮಗೆ ತಕ್ಷಣ ಶಕ್ತಿ ಸಿಗುವುದು?

2.ಜೀರ್ಣ ಕ್ರಿಯೆಯಲ್ಲಿ ಬಾಯಿಯ ಪಾತ್ರವೇನು?

3.ವಿಲ್ಲೈಗಳ ಕಾರ್ಯ ತಿಳಿಸಿ.

4.ಬೇಯಿಸಿದ ಎಲೆಯ ಮೇಲೆ ಅಯೋಡಿನ್ ದ್ರಾವಣ ಹಾಕಿದಾಗ ಏನಾಗುವುದು?

8 ನೇ ತರಗತಿ ಗಣಿತ ಘಟಕ ಪರೀಕ್ಷಾ ಪ್ರಶ್ನೆಗಳು

I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1. BA +25 =B2 ರಲ್ಲಿ A,B ಗಳು ಅಂಕಿಗಳಾದರೆ A ಯ ಬೆಲೆ :

    ಎ) 5          ಬಿ) 2             ಸಿ) 6          ಡಿ) 7

2.  31y5 ಎಂಬಂದು 9 ರ ಗುಣಕವಾಗಿದ್ದು y ಒಂದು ಅಂಕಿ ಆದರೆ y ಬೆಲೆ ;

     ಎ) 6           ಬಿ) 7            ಸಿ) 8         ಡಿ) 0

3.  392_  ಈ ನಾಲ್ಕಂಕಿ ಸಂಖ್ಯೆಯು 3ರ ಗುಣಕವಾಗಿದೆ. ಹಾಗಾದರೆ ಖಾಲಿ ಬಿಟ್ಟ ಬಿಡಿ ಸ್ಥಾನದ ಅಂಕಿ;

     ಎ) 2            ಬಿ) 3          ಸಿ) 4          ಡಿ) 5

4. a/b ನ ಸಂಕಲನದ ವಿಲೋಮಾಂಶ

     ಎ)a            ಬಿ) b           ಸಿ) 0       ಡಿ)-a/b

5, x-2=7 ಸಮೀಕರಣದ ಪರಿಹಾರ;

      ಎ) 9          ಬಿ) 5           ಸಿ) 7       ಡಿ) -9

II.ಒಂದು ಜೋಡಿ ಸಂಬಂಧ ಅರಿತು ಇನ್ನೊಂದು ಜೋಡಿ ಪೂರ್ಣಗೊಳಿಸಿ.

 1.1A×A=9A : A= 6    : :   2B x B = 12B :_________

2. 1210 :    2,5,10    : :    594 : ________

3.ಗುಣಾಕಾರದ ಅನನ್ಯತಾಂಶ : ______ : : ಸಂಕಲನದ ಅನನ್ಯತಾಂಶ : 0

4. x - 2 =7   :  9    : :    y+3= 10 :______

5.2x+3x=10 : 5x=10    : :    5y-2y=12 : ______

III.ಹೊಂದಿಸಿ ಬರೆಯಿರಿ.

1.ಆವೃತ ಗುಣ                   --- a + b = b + a

2.ಪರಿವರ್ತನಿಯ ನಿಯಮ   --- a +(b + c) = (a + b) + c

3.ಸಹವರ್ತನಿಯ ನಿಯಮ   --- a (b + c) = ab + ac

4,ವಿಭಾಜಕ ನಿಯಮ           --- a + b ∈ R

IV.ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ.

1.ಒಂದು ಸಂಖ್ಯೆಯ ಬಿಡಿ ಸ್ಥಾನ ________ ಆದಾಗ ಮಾತ್ರ ಅದು ಹತ್ತರಿಂದ ಪೂರ್ಣವಾಗಿ ಭಾಗವಾಗುತ್ತದೆ.

2.ಸಂಖ್ಯೆಗಳಾದ_____ ಮತ್ತು _____ ಗಳಿಗೆ ತಾವೇ ವ್ಯುತ್ಕ್ರಮಗಳು.

3. 3x= 2x+18 ರಲ್ಲಿ x = __________

4.ಒಂದು ಸಂಖ್ಯೆಗೆ 5ನ್ನು ಸೇರಿಸಿದಾಗ 30 ಬರುತ್ತದೆ.ಇದರ ಸಮೀಕರಣ ರೂಪ ___________

V.ಸರಿಯೋ ತಪ್ಪೋ ತಿಳಿಸಿ.

1.616 ಸಂಖ್ಯೆಯು 3 ರಿಂದ ಪೂರ್ಣವಾಗಿ ಭಾಗವಾಗುತ್ತದೆ.

2.ದತ್ತ ಸಂಖ್ಯೆಯ ಅಂಕಿಗಳನ್ನು ಕೂಡುತ್ತಾ ಬಂದಾಗ ಏಕಾಂಕವು 9 ಆದರೆ ಆ ಸಂಖ್ಯೆಯು 9 ರಿಂದ ಭಾಗವಾಗುತ್ತದೆ.

3.ಬಾಗಲಬ್ಧ ಸಂಖ್ಯೆಗಳು ಸಂಕಲನದ ಪರಿವರ್ತನೀಯ ಗುಣವನ್ನು ಹೊಂದಿವೆ.

4. 2x = 8 ಆದಾಗ x =⁸/₂ ಆಗುತ್ತದೆ.

VI.ಕೆಳಗಿನವುಗಳಿಗೆ ಕಿರು ಉತ್ತರ ಕೊಡಿ.

 1.  2,3,5,9,10 ಗಳಿಂದ ಪೂರ್ಣವಾಗಿ ಭಾಗವಾಗುವ ಒಂದು  ಮೂರಂಕಿ ಸಂಖ್ಯೆ  ರಚಿಸಿ.

2. 21013 ವು 9 ರಿಂದ ಪೂರ್ಣವಾಗಿ ಭಾಗವಾಗಲು ಅದಕ್ಕೆ ಕೂಡ ಬೇಕಾದ ಕನಿಷ್ಠ ಸಂಖ್ಯೆ  ಏನು?

3. 2x/3 = 18 ಸಮೀಕರಣ ಬಿಡಿಸಿರಿ.

4.ಬೈಚುಂಗನ ಅಪ್ಪ ಬೈಚುಂಗನ ಅಜ್ಜನಿಗಿಂತ 26 ವರ್ಷ ಚಿಕ್ಕವನು ಮತ್ತು ಬೈಚುಂಗನಿಗಿಂತ 29 ವರ್ಷ ದೊಡ್ಡವನು. ಮೂವರ ವಯಸ್ಸುಗಳ ಮೊತ್ತ 135 ವರ್ಷಗಳು.ಇದನ್ನು ಸಮೀಕರಣ ರೂಪದಲ್ಲಿ ಬರೆಯಿರಿ.

VII.ಈ ಕೆಳಗಿನ ಲೆಕ್ಕಾಚಾರಗಳಿಗೆ ನೀಡಿರುವ ಹಂತಗಳನ್ನು ಅನುಕ್ರಮವಾಗಿ ಒಂದರ ಕೆಳಗೆ ಒಂದರಂತೆ ಜೋಡಿಸಿ ಬರೆಯಿರಿ.

1. -⅚ ಮತ್ತು ⅝ ಇವುಗಳ ನಡುವೆ ಯಾವುದಾದರೂ 10 ಭಾಗಲಬ್ಧ ಸಂಖ್ಯೆ ಬರೆಯುವುದು.

[-5×4/6×4 = 20/24]   [-19/24, -18/24, -17/24 ….14/24]     [5×3/8×3 =15/24]   [6,8 ಗಳ ಲಸಾಅ = 24]

2.ಸಮೀಕರಣ ಬಿಡಿಸುವುದು [8x +4=3 (x-1)+7]  [5x = 0]   [8x-3x=4-4]   [x=0]   [8x +4=3x-3+7]   [x =⁰/₅]

3.ಸಮೀಕರಣ ಬಿಡಿಸಿ; [10x+7=3x-28]   [7x=-35]    [x=-5]     [10x-3x= -28 -7]     [x=-³⁵/₇]


      

ಶುಕ್ರವಾರ, ಫೆಬ್ರವರಿ 25, 2022

ರಾಸಾಯನಿಕ ಕ್ರಿಯೆಯ ಗುಣಲಕ್ಷಣಗಳು -ಪರಿಕಲ್ಪನಾ ನಕ್ಷೆ (ಮೈಂಡ್ ಮ್ಯಾಪ್)

ಈ ಲೇಖನವನ್ನು ಮೈಂಡ್ ಮ್ಯಾಪ್ ಬಳಸಿಕೊಂಡು ಬರೆಯಲಾಗಿದೆ. ಮೈಂಡ್ ಮ್ಯಾಪ್ ನ ವೀಕ್ಷಣೆಗಾಗಿ ಇಮೇಜನ್ನು ಕ್ಲಿಕ್ ಮಾಡಿ.

ರಾಸಾಯನಿಕ ಕ್ರಿಯೆ ಎಂದರೇನು?
ರಾಸಾಯನಿಕ ಬಂಧಗಳನ್ನು ಒಡೆಯುವ ಮತ್ತು ಉಂಟುಮಾಡುವ ಕ್ರಿಯೆಯನ್ನು ರಾಸಾಯನಿಕ ಕ್ರಿಯೆ ಎನ್ನುತ್ತೇವೆ.
ರಾಸಾಯನಿಕ ಬಂಧ ಎಂದರೇನು?
ವಸ್ತುವಿನ/ಗಳ ಪರಮಾಣುಗಳ ನಡುವೆ ಇಲೆಕ್ಟ್ರಾನುಗಳನ್ನು ಬಿಟ್ಟುಕೊಡುವ ಅಥವಾ ಸ್ವೀಕರಿಸುವ  ಅಥವಾ ಹಂಚಿಕೊಳ್ಳುವುದರಿಂದ ಉಂಟಾಗುವ ಬಂಧವನ್ನು ರಾಸಾಯನಿಕ ಬಂಧ ಎನ್ನುತ್ತೇವೆ.
ಪ್ರತಿವರ್ತಕ ಗಳು ಎಂದರೇನು?
ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ವಸ್ತುಗಳನ್ನು ಪ್ರತಿವರ್ತಕಗಳು ಎನ್ನುತ್ತೇವೆ.
ಉತ್ಪನ್ನಗಳು ಎಂದರೇನು?
ರಾಸಾಯನಿಕ ಕ್ರಿಯೆಯಿಂದ ಉಂಟಾದ ಹೊಸ ವಸ್ತುಗಳನ್ನು ಉತ್ಪನ್ನಗಳು ಎನ್ನುತ್ತೇವೆ.

  ನಾವು ಸಕ್ಕರೆಯನ್ನು ಕಾಯಿಸಿದಾಗ ಅದು ಹೊಸ ವಸ್ತುವಾಗಿ ಅಂದರೆ ಕಾರ್ಬನ್ ಮತ್ತು ನೀರಾವಿ ಗಳಾಗಿ ಬದಲಾಗುತ್ತದೆ.ಈ ಬದಲಾವಣೆಯನ್ನು ನಾವು ರಾಸಾಯನಿಕ ಬದಲಾವಣೆ ಎನ್ನುತ್ತೇವೆ.ಈ ರಾಸಾಯನಿಕ ಬದಲಾವಣೆಗೆ ಕಾರಣವಾದ ಕ್ರಿಯೆಯನ್ನು ರಾಸಾಯನಿಕ ಕ್ರಿಯೆ ಎನ್ನುತ್ತೇವೆ. ಇಲ್ಲಿ
ನಾವು ಸಕ್ಕರೆಯನ್ನು ಪ್ರತಿವರ್ತಕ ಎಂದರೆ ಕಾರ್ಬನ್ ಮತ್ತು ನೀರಾವಿ ಗಳನ್ನು ಉತ್ಪನ್ನಗಳು ಎನ್ನುತ್ತೇವೆ.

ರಾಸಾಯನಿಕ ಕ್ರಿಯೆಯ ಗುಣಲಕ್ಷಣಗಳು;
  1)ರಾಸಾಯನಿಕ ಕ್ರಿಯೆಯಲ್ಲಿ ಅನಿಲದ ಬಿಡುಗಡೆಯಾಗುತ್ತದೆ.
ಉದಾಹರಣೆಗೆ ಸೋಡಿಯಂ ಕಾರ್ಬೋನೇಟ್ ಮತ್ತು ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲ ಗಳನ್ನು ಸೇರಿಸಿದಾಗ ಸೋಡಿಯಂ ಕ್ಲೋರೈಡ್, ನೀರು ಮತ್ತು ಇಂಗಾಲದ ಡೈಯಾಕ್ಸೈಡ್ ಉಂಟಾಗುತ್ತವೆ.ಇಲ್ಲಿ ಕಾರ್ಬನ್ ಡೈಆಕ್ಸೈಡ್ ಎಂಬುದು ಒಂದು ಅನಿಲವಾಗಿದೆ.
2)ಬಣ್ಣದಲ್ಲಿ ಬದಲಾವಣೆ ;
ಉದಾಹರಣೆಗೆ ಪರ್ಪಲ್ ಬಣ್ಣದ ಪೊಟ್ಯಾಶಿಯಂ ಪರಮಾಂಗನೇಟ್ ಗೆ ನಿಂಬೆರಸವನ್ನು ಸೇರಿಸಿದಾಗ ಅದು ಬಣ್ಣರಹಿತ ದ್ರಾವಣವಾಗುತ್ತದೆ.
3)ಪ್ರಸಿಪಿಟೇಟ್(ಅವಕ್ಷೇಪ) ಉಂಟಾಗುವಿಕೆ;
ಉದಾಹರಣೆಗೆ ದ್ರವೀಯ ಬೇರಿಯಂ ಕ್ಲೋರೈಡ್ ಅನ್ನು ದ್ರವೀಯ ಸಲ್ಫ್ಯೂರಿಕ್ ಆಮ್ಲ ಕ್ಕೆ ಸೇರಿಸಿದಾಗ ಬಿಳಿ ಬಣ್ಣದ ಅವಕ್ಷೇಪವಾದ ಬೇರಿಯಂ ಸಲ್ಫೇಟ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲ ಉಂಟಾಗುತ್ತದೆ.
4)ಸ್ಥಿತಿಯ ಬದಲಾವಣೆ ;
ಉದಾಹರಣೆಗೆ ಮೇಣದ ಬತ್ತಿಯನ್ನು ಸುಟ್ಟಾಗ ಮಸಿ, ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಅನಿಲಗಳು ಉತ್ಪತ್ತಿಯಾಗುತ್ತವೆ.

ಬುಧವಾರ, ಫೆಬ್ರವರಿ 23, 2022

ಬೆಳಕಿನ ವಕ್ರೀಭವನ -ಪರಿಕಲ್ಪನೆಯ ಮೈಂಡ್ ಮ್ಯಾಪ್

'ಬೆಳಕಿನ ವಕ್ರೀಭವನ ಪರಿಕಲ್ಪನೆಯ  ಮೈಂಡ್ ಮ್ಯಾಪ್' - ಈ ಲೇಖನವನ್ನು ಮೈಂಡ್ ಮ್ಯಾಪ್ ಅನ್ನು ಬಳಸಿಕೊಂಡು ಬರೆಯಲಾಗಿದೆ.

ಬೆಳಕಿನ ವಕ್ರೀಭವನ ಎಂದರೇನು?
ಬೆಳಕಿನ ವಕ್ರೀಭವನವು ಒಂದು ವಿದ್ಯಮಾನ.
ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಓರೆಯಾಗಿ ಚಲಿಸುವಾಗ ತನ್ನ ಪ್ರಸರಣದ ದಿಕ್ಕನ್ನು ಬದಲಿಸುತ್ತದೆ.ಈ ವಿದ್ಯಮಾನವನ್ನು ಬೆಳಕಿನ ವಕ್ರೀಭವನ ಎನ್ನುತ್ತೇವೆ.

  ಬೆಳಕು ಬೇರೆ ಬೇರೆ ಮಾಧ್ಯಮದಲ್ಲಿ ಬೇರೆ ಬೇರೆ ವೇಗವನ್ನು ಹೊಂದಿರುತ್ತದೆ.ಏಕೆಂದರೆ ಬೇರೆ ಬೇರೆ ಮಾಧ್ಯಮಗಳ ಸಾಂದ್ರತೆ ಬೇರೆ ಬೇರೆಯಾಗಿರುತ್ತದೆ.
ಈ ಕಾರಣದಿಂದ ಮಾಧ್ಯಮದಿಂದ ಮಾಧ್ಯಮಕ್ಕೆ ಬೆಳಕು ಸಾಗುವಾಗ ಅದರ ವೇಗದಲ್ಲಿ ಬದಲಾವಣೆಯಾಗುತ್ತದೆ. ವೇಗ ಬದಲಾವಣೆಯಾದಾಗ ಅದರ ಪ್ರಸರಣದ ದಿಕ್ಕು ಬದಲಾಗುತ್ತದೆ.ಎರಡನೇ ಮಾಧ್ಯಮದಲ್ಲಿ ಬೆಳಕಿನ ವೇಗ ಹೆಚ್ಚಾದರೆ,ಎರಡು ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಪತನ ಬಿಂದುವಿನಲ್ಲಿ ಎಳೆದ ಲಂಬದಿಂದ ದೂರಕ್ಕೆ ಬಾಗುತ್ತದೆ.ಅದೇ ರೀತಿ ಎರಡನೇ ಮಾಧ್ಯಮದಲ್ಲಿ ಬೆಳಕಿನ ವೇಗ ಕಡಿಮೆಯಾದರೆ ಅದು ಪತನ ಬಿಂದುವಿನಲ್ಲಿ ಎಳೆದ ಲಂಬದ ಕಡೆಗೆ ಬಾಗುತ್ತದೆ.

ಬೆಳಕಿನ ವಕ್ರೀಭವನದ ನಿಯಮಗಳು ;
I.ಬೆಳಕಿನ ವಕ್ರೀಭವನವಾದಾಗ, ಪತನ ಕಿರಣ,ವಕ್ರಿಮ ಕಿರಣ ಮತ್ತು ಪತನ ಬಿಂದುವಿನಲ್ಲಿ ಎರಡು ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಎಳೆದ ಲಂಬ ಇವು 3 ಒಂದೇ ಸಮತಲದಲ್ಲಿ ಇರುತ್ತವೆ.
II.ಪತನಕೋನದ ಸೈನು ಮತ್ತು ವಕ್ರಿಮ ಕೋನದ ಸೈನು ಗಳಿಗೆ ಇರುವ ಅನುಪಾತ ಒಂದು ಸ್ಥಿರಾಂಕ ವಾಗಿರುತ್ತದೆ.
ಇದನ್ನು ಸ್ನೆಲ್ ನ ವಕ್ರೀಭವನದ ನಿಯಮ ಎನ್ನುತ್ತಾರೆ.
       ಈ ಸ್ಥಿರಾಂಕ ವನ್ನು ಒಂದನೇ ಮಾಧ್ಯಮಕ್ಕೆ ಸಂಬಂಧಿಸಿದಂತೆ ಎರಡನೇ ಮಾಧ್ಯಮದ ಸಾಪೇಕ್ಷ ವಕ್ರೀಭವನ ಸೂಚ್ಯಂಕ ಎನ್ನುತ್ತಾರೆ.
ವಕ್ರೀಭವನ ಸೂಚ್ಯಂಕ =ಒಂದನೇ ಮಾಧ್ಯಮದಲ್ಲಿ ಬೆಳಕಿನ ವೇಗ /ಎರಡನೇ ಮಾಧ್ಯಮದಲ್ಲಿ ಬೆಳಕಿನ ವೇಗ. ----> n = v1/v2
ಒಂದನೇ ಮಧ್ಯಮವು ಗಾಳಿ ಅಥವಾ ನಿರ್ವಾತ ಆದಾಗ ಎರಡನೇ ಮಧ್ಯಮದ ವಕ್ರೀಭವನ ಸೂಚ್ಯಂಕ n = C/v .
ಇದನ್ನು ಎರಡನೇ ಮಧ್ಯಮದ ನಿರಪೇಕ್ಷ ವಕ್ರೀಭವನ ಸೂಚ್ಯಂಕ ಎನ್ನುತ್ತೇವೆ.
  ಒಂದು ಮಾಧ್ಯಮದ ಅಥವಾ ವಸ್ತುವಿನ ವಕ್ರೀಭವನ ಸೂಚ್ಯಂಕವು ಹೆಚ್ಚಾಗಿದ್ದರೆ ಅದು ಸಾಪೇಕ್ಷವಾಗಿ ದೃಕ್ ಸಾಂದ್ರ ಮಾಧ್ಯಮವಾಗಿರುತ್ತದೆ.ಅದೇ ರೀತಿ ಒಂದು ವಸ್ತುವಿನ  ನಿರಪೇಕ್ಷ ವಕ್ರೀಭವನ ಸೂಚ್ಯಂಕವು ಕಡಿಮೆಯಾಗಿದ್ದರೆ ಅದು ದೃಕ್ ವಿರಳ ಮಾಧ್ಯಮವಾಗಿರುತ್ತದೆ.

ಈ ಲೇಖನವನ್ನು ಮೈಂಡ್ ಮ್ಯಾಪ್ ಅನ್ನು ಬಳಸಿಕೊಂಡು ಬರೆಯಲಾಗಿದೆ.

ಗುರುವಾರ, ಫೆಬ್ರವರಿ 17, 2022

ಬೆಳಕು - ಪರಿಕಲ್ಪನಾ ನಕ್ಷೆ ( ಮೈಂಡ್ ಮ್ಯಾಪ್)

ಬೆಳಕು ಪರಿಕಲ್ಪನೆಯ ಈ ಲೇಖನವನ್ನು ಮೈಂಡ್ ಮ್ಯಾಪ್ ರಚಿಸಿಕೊಂಡು ಬರೆಯಲಾಗಿದೆ.

ಬೆಳಕು ಎಂದರೇನು?
ಬೆಳಕು, ಶಕ್ತಿಯ ರೂಪಗಳಲ್ಲಿ ಒಂದು.
ಬೆಳಕಿನ ಮೂಲಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ ನೈಸರ್ಗಿಕ ಮೂಲಗಳು ಮತ್ತು ಕೃತಕ ಮೂಲಗಳು.
ಬೆಳಕಿನ ನೈಸರ್ಗಿಕ ಮೂಲಗಳಿಗೆ ನಕ್ಷತ್ರಗಳು ಮಿಂಚುಹುಳು ಇತ್ಯಾದಿ ಉದಾಹರಣೆಗಳಾಗಿವೆ.ವಿದ್ಯುತ್ ಬಲ್ಬ್ ಮೇಣದಬತ್ತಿ ಇತ್ಯಾದಿ ಬೆಳಕಿನ ಕೃತಕ ಮೂಲಗಳಿಗೆ ಉದಾಹರಣೆಗಳಾಗಿವೆ.

ಬೆಳಕಿನ ಪ್ರತಿಫಲನ ಎಂದರೇನು?
ಬೆಳಕು ವಸ್ತುವಿನ ಮೇಲೆ ಬಿದ್ದು ಹಿಂದಕ್ಕೆ ಬರುವುದಕ್ಕೆ ಬೆಳಕಿನ ಪ್ರತಿಫಲನ ಎನ್ನುತ್ತೇವೆ.
ಬೆಳಕಿನ ಪ್ರತಿಫಲನ ವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ; ನಿಯತ ಪ್ರತಿಫಲನ ಮತ್ತು ಅನಿಯತ ಪ್ರತಿಫಲನ .
ನಿಯತ ಪ್ರತಿಫಲನವು ಸಮತಲ ಮೇಲ್ಮೈಯಲ್ಲಿ ಉಂಟಾಗುತ್ತದೆ.ನಿಯತ ಪ್ರತಿಫಲನ ವಾದಾಗ ಸ್ಪಷ್ಟ ಪ್ರತಿಬಿಂಬ ಉಂಟಾಗುತ್ತದೆ.ಆದರೆ ಅನಿಯತ ಪ್ರತಿಫಲನವು ಸಮತಲವಾಗಿ ಇಲ್ಲದ ಮೇಲ್ಮೈಯಲ್ಲಿ ಉಂಟಾಗುತ್ತದೆ.ಇಲ್ಲಿ ಪ್ರತಿಬಿಂಬವು ಸ್ಪಷ್ಟವಾಗಿ ಕಾಣುವುದಿಲ್ಲ.

ಬೆಳಕಿನ ಪ್ರತಿಫಲನದ ನಿಯಮಗಳು :
ಬೆಳಕಿನ ಪ್ರತಿಫಲನ ವಾದಾಗ ಎರಡು ನಿಯಮಗಳ ಅನುಸಾರ ಉಂಟಾಗುತ್ತದೆ.
ಅವುಗಳೆಂದರೆ;
I.ಬೆಳಕಿನ ಪ್ರತಿಫಲನ ವಾದಾಗ,ಪತನ ಕಿರಣ, ಪ್ರತಿಫಲನ ಕಿರಣ ಮತ್ತು ಪತನ ಬಿಂದುವಿನಲ್ಲಿ ಎಳೆದ ಲಂಬ ಇವು ಮೂರು ಒಂದೇ ಸಮತಲದಲ್ಲಿ ಇರುತ್ತವೆ.
II.ಬೆಳಕಿನ ಪ್ರತಿಫಲನ ವಾದಾಗ ಪತನ ಕೋನವು ಪ್ರತಿಫಲನ ಕೋನಕ್ಕೆ ಸಮವಾಗಿರುತ್ತದೆ.

ದರ್ಪಣ ಎಂದರೇನು?
ನುಣುಪಾದ ಪ್ರತಿಫಲಿಸುವ ಮೇಲ್ಮೈಯನ್ನು ದರ್ಪಣ ಎನ್ನುತ್ತೇವೆ.

ದರ್ಪಣದ ವಿಧಗಳು;
ದರ್ಪಣವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು.ಅವುಗಳೆಂದರೆ;ಸಮತಲ ದರ್ಪಣ ಮತ್ತು ಗೋಳೀಯ ದರ್ಪಣ.ದರ್ಪಣದ ಮೇಲ್ಮೈ ಸಮತಟ್ಟಾಗಿದ್ದರೆ ಅದನ್ನು ಸಮತಲ ದರ್ಪಣ ಎನ್ನುತ್ತೇವೆ.ದರ್ಪಣದ ಮೇಲ್ಮೈ ಗೋಳದ ಭಾಗದಂತಿದ್ದರೆ ಅದನ್ನು ಗೋಳೀಯ ದರ್ಪಣ ಎನ್ನುತ್ತೇವೆ.
ಗೋಳಿಯ ದರ್ಪಣವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು, ಅವುಗಳೆಂದರೆ; ಪೀನ ದರ್ಪಣ ಮತ್ತು ನಿಮ್ನ ದರ್ಪಣ.
ದರ್ಪಣದ ಮೈ ಉಬ್ಬಿದ್ದರೆ ಅದನ್ನು ಪೀನ ದರ್ಪಣ ಎನ್ನುತ್ತೇವೆ.
ದರ್ಪಣದ ಮೈ ತಗ್ಗಾಗಿದ್ದರೆ ಅದನ್ನು ನಿಮ್ನ ದರ್ಪಣ ಎನ್ನುತ್ತೇವೆ.

ಬೆಳಕು ವಸ್ತುವಿನ ಮೇಲೆ ಬಿದ್ದಾಗ ಏನಾಗುತ್ತದೆ?
ಬೆಳಕು ವಸ್ತುವಿನ ಮೇಲೆ ಬಿದ್ದಾಗ ವಸ್ತುವಿನಿಂದ ಹೀರಲ್ಪಡಬಹುದು ಅಥವಾ ವಸ್ತುವಿನ ಮೂಲಕ ಹಾದು ಹೋಗಬಹುದು ಅಥವಾ ಪ್ರತಿಫಲಿಸಬಹುದು.

ಮೈಂಡ್ ಮ್ಯಾಪ್ ಅನ್ನು ಈ ಲೇಖನದೊಂದಿಗೆ ಲಗತ್ತಿಸಲಾಗಿದೆ.

ಮಂಗಳವಾರ, ಫೆಬ್ರವರಿ 15, 2022

ಸಸ್ಯಗಳು- ಪರಿಕಲ್ಪನೆ - 6ನೇ ತರಗತಿ

ಈ ಲೇಖನವನ್ನು ಮೈಂಡ್ ಮ್ಯಾಪನ್ನು ಬಳಸಿ ಬರೆಯಲಾಗಿದೆ.

ಸಸ್ಯಗಳು(plants) ಎಂದರೇನು ?
ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಬಲ್ಲ ಜೀವಿಗಳ ವರ್ಗಕ್ಕೆ ಸಸ್ಯಗಳು ಎನ್ನುತ್ತೇವೆ.
<img src="classification of plants.png" alt="mind map explaining the types of plants">



ಸಸ್ಯಗಳನ್ನು ಅವುಗಳ ಕಾಂಡಗಳ  ಆಧಾರದ ಮೇಲೆ ನಾಲ್ಕು ಬಗೆಗಳಾಗಿ ವಿಂಗಡಿಸಲಾಗಿದೆ.
   ಗಿಡ್ಡಗಿರುವ, ಹಸಿರು ಮೃದು ಕಾಂಡವನ್ನು ಹೊಂದಿರುವ ಸಸ್ಯಗಳಿಗೆ ಗಿಡಮೂಲಿಕೆಗಳು(herbs) ಎನ್ನುತ್ತೇವೆ.
  ಮಧ್ಯಮ ಎತ್ತರ, ಸಣ್ಣ, ಗಟ್ಟಿ ಕಾಂಡವನ್ನು ಹೊಂದಿರುವ ಸಸ್ಯಗಳ ಗುಂಪಿಗೆ ಪೊದೆಗಳು(shrubs ) ಎನ್ನುತ್ತೇವೆ.
  ಎತ್ತರವಾಗಿರುವ, ದಪ್ಪ, ಗಟ್ಟಿಯಾದ ಕಾಂಡವನ್ನು ಹೊಂದಿರುವ ಸಸ್ಯಗಳಿಗೆ ಮರಗಳು(trees) ಎನ್ನುತ್ತೇವೆ.
  ದುರ್ಬಲ, ನೇರವಾಗಿ ನಿಲ್ಲಲಾಗದ, ಉದ್ದನೆಯ ಕಾಂಡವಿರುವ ಸಸ್ಯಗಳನ್ನು ಬಳ್ಳಿಗಳು ಎನ್ನುತ್ತೇವೆ.
ನೆಲದ ಮೇಲೆ ಹರಡುವ ಬಳ್ಳಿಗಳನ್ನು ನೆಲಬಳ್ಳಿಗಳು (creepers) ಎಂದರೆ, ಆಧಾರವನ್ನು ಪಡೆದು ಹತ್ತುವ ಬಳ್ಳಿಗಳನ್ನು ಅಡರು ಬಳ್ಳಿಗಳು(climbers) ಎನ್ನುತ್ತೇವೆ.
ಸಸ್ಯದ ಭಾಗಗಳನ್ನು ಗಮನಿಸೋಣ;
 ಸಸ್ಯವು ನಾಲ್ಕು ಪ್ರಮುಖ ಭಾಗಗಳನ್ನು ಒಳಗೊಂಡಿದೆ ಅವುಗಳು; ಎಲೆ, ಬೇರು, ಕಾಂಡ, ಹೂ ಆಗಿವೆ.
ಎಲೆಯು ಎಲೆತೊಟ್ಟು(petiole ) ಮತ್ತು ಪತ್ರಪಟಲ(lamina)ವನ್ನು ಹೊಂದಿದೆ.
ಪತ್ರಪಟಲದಲ್ಲಿರುವ ಗೆರೆಗಳಂತಹ ರಚನೆಗಳನ್ನು ಸಿರೆಗಳು(vein) ಎನ್ನುತ್ತೇವೆ. ಮತ್ತು ಈ ವಿನ್ಯಾಸವನ್ನು ಎಲೆಯ ಸಿರಾ ವಿನ್ಯಾಸ(leaf venation) ಎನ್ನುತ್ತೇವೆ.
ಮಧ್ಯದ ಗೆರೆಯನ್ನು ಮಧ್ಯ ಸಿರೆ(midrib) ಎನ್ನುತ್ತೇವೆ.
ಮಧ್ಯ ಸಿರೆಯ ಎರಡೂ ಕಡೆ ಬಲೆಯ ರೀತಿಯ ವಿನ್ಯಾಸವಿದ್ದರೆ ಅದನ್ನು ಜಾಲಿಕಾ ಸಿರಾ ವಿನ್ಯಾಸ (reticulate venation) ಎನ್ನುತ್ತೇವೆ.
ಮಧ್ಯ ಸಿರೆಯ ಎರಡೂ ಕಡೆ ಸಮಾನಾಂತರವಾಗಿ ಸಿರೆಗಳಿದ್ದರೆ ಅದನ್ನು ಸಮಾನಾಂತರ ಸಿರಾ ವಿನ್ಯಾಸ (parallel venation) ಎನ್ನುತ್ತೇವೆ.

ಬಾಷ್ಪವಿಸರ್ಜನೆ ಎಂದರೇನು? ದ್ಯುತಿಸಂಶ್ಲೇಷಣೆ ಎಂದರೇನು?
ಎಲೆಯು ಎರಡು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಅವುಗಳೆಂದರೆ;1)ಬಾಷ್ಪವಿಸರ್ಜನೆ(transpiration) ಅಂದರೆ ಸಸ್ಯದಲ್ಲಿರುವ ಹೆಚ್ಚುವರಿ ನೀರು ಪತ್ರಪಟಲದಲ್ಲಿರುವ ಸೂಕ್ಷ್ಮ ರಂಧ್ರಗಳ ಮೂಲಕ ಆವಿಯಾಗುತ್ತದೆ. ಇದನ್ನು ಬಾಷ್ಪವಿಸರ್ಜನೆ ಎನ್ನುತ್ತೇವೆ.
2) ದ್ಯುತಿಸಂಶ್ಲೇಷಣೆ;ಎಲೆಯು ನೀರು, ಸೂರ್ಯನ ಬೆಳಕು, ಕಾರ್ಬನ್ ಡೈಯಾಕ್ಸೈಡ್ ಗಳನ್ನು ಬಳಸಿಕೊಂಡು ಆಹಾರವನ್ನು ತಯಾರಿಸುತ್ತದೆ. ಈ ಪ್ರಕ್ರಿಯೆಯನ್ನು ದ್ಯುತಿಸಂಶ್ಲೇಷಣೆ(photosynthesis) ಎನ್ನುತ್ತೇವೆ.

  ಈಗ ಬೇರಿನ ಬಗ್ಗೆ ತಿಳಿಯೋಣ.ಬೇರುಗಳಲ್ಲಿ ತಾಯಿಬೇರು(taproot) ಮತ್ತು ತಂತು ಬೇರು(fibrous roots) ಎಂಬ ಎರಡು ವಿಧಗಳಿವೆ.ತಾಯಿ ಬೇರಿನಲ್ಲಿ ಬದಿಗಳಲ್ಲಿರುವ ಸಣ್ಣ ಬೇರುಗಳನ್ನು ಪಾರ್ಶ್ವ ಬೇರುಗಳು ಎನ್ನುತ್ತೇವೆ.
ತಾಯಿ ಬೇರಿರುವ ಸಸ್ಯಗಳ ಎಲೆಗಳು ಜಾಲಿಕ ಸಿರಾ ವಿನ್ಯಾಸವನ್ನು ಹೊಂದಿರುತ್ತವೆ.
ತಂತು ಬೇರುಗಳನ್ನು ಹೊಂದಿರುವ ಸಸ್ಯಗಳಲ್ಲಿ ಎಲೆಗಳು ಸಮಾನಾಂತರ ಸಿರಾ ವಿನ್ಯಾಸವನ್ನು ಹೊಂದಿರುತ್ತವೆ.
 ಕೆಲವೊಂದು ಸಸ್ಯಗಳಲ್ಲಿ ಬೇರುಗಳು ಮಣ್ಣಿನಿಂದ ನೀರು ಮತ್ತು ಖನಿಜಗಳನ್ನು ಹೀರುವುದರ ಜೊತೆಗೆ ಆಹಾರ ಶೇಖರಣೆಯ ಭಾಗವಾಗುತ್ತದೆ.ಸಿಹಿ ಗೆಣಸು,ಮೂಲಂಗಿ, ಕ್ಯಾರೆಟ್ ಗಳು ಇದಕ್ಕೆ ಉದಾಹರಣೆಗಳಾಗಿವೆ.

ಸಸ್ಯಗಳಲ್ಲಿ ಕಾಂಡವು ನೀರು, ಖನಿಜ, ಆಹಾರಗಳನ್ನು ಸಾಗಿಸುವ ಅಂಗಾಂಶಗಳನ್ನು ಹೊಂದಿದೆ.
ಸಸ್ಯಗಳಲ್ಲಿ ಹೂವು ಸಂತಾನೋತ್ಪತ್ತಿಯ ಭಾಗವಾಗಿದೆ.ಹೂ, ಪುಷ್ಪಪತ್ರ, ಪುಷ್ಪದಳಗಳು, ಶಲಾಕೆ, ಕೇಸರಗಳನ್ನು ಹೊಂದಿದೆ.

ಮಂಗಳವಾರ, ಫೆಬ್ರವರಿ 8, 2022

ಉಷ್ಣ ಎಂದರೇನು?

ಉಷ್ಣ(Heat)ವು ಶಕ್ತಿಯ ಒಂದು ರೂಪ.ಒಂದು ವಸ್ತುವಿನ ಉಷ್ಣವು ಆ ವಸ್ತುವಿನಲ್ಲಿರುವ ಅಣುಗಳ ಚಲನ ಶಕ್ತಿಯ(Kinetic energy) ಮೊತ್ತ ಆಗಿರುತ್ತದೆ.ವಸ್ತುವಿನ ಅಣುಗಳು ತಮ್ಮ ಚಲನೆಯ ಕಾರಣದಿಂದ ಗಳಿಸಿಕೊಳ್ಳುವ ಶಕ್ತಿಯನ್ನು ಅವುಗಳ ಚಲನಶಕ್ತಿ ಎನ್ನುತ್ತೇವೆ. ಉಷ್ಣವನ್ನು ಅಳೆಯುವ ಅಂತರಾಷ್ಟ್ರೀಯ ಏಕಮಾನ ಜೂಲ್(joule) ಆಗಿದೆ.
ಉಷ್ಣದ ಪರಿಣಾಮಗಳು ;
ಒಂದು ವಸ್ತುವಿನ ಉಷ್ಣವನ್ನು ಹೆಚ್ಚು ಮಾಡಿದಾಗ ಆ ವಸ್ತು ಹಿಗ್ಗುತ್ತದೆ(ವ್ಯಾಕೋಚಿಸುತ್ತದೆ).
ವಸ್ತುವಿನ ಉಷ್ಣವನ್ನು ಕಡಿಮೆ ಮಾಡಿದಾಗ ವಸ್ತು ಕುಗ್ಗುತ್ತದೆ( ಸಂಕೋಚಿಸುತ್ತದೆ).
ಒಂದು ವಸ್ತುವಿನ ಉಷ್ಣವನ್ನು ಹೆಚ್ಚು ಮಾಡಿದಾಗ  ಅದರ ತಾಪ(temperature)ವೂ ಹೆಚ್ಚಾಗುತ್ತದೆ.
ಒಂದು ವಸ್ತುವಿನ ಅಣುಗಳ ಸರಾಸರಿ ಚಲನಶಕ್ತಿಗೆ ತಾಪ ಎನ್ನುತ್ತೇವೆ.
ಉಷ್ಣ ದಿಂದ ವಸ್ತುಗಳ ಸ್ಥಿತಿ ಬದಲಾವಣೆಯಾಗುತ್ತದೆ.

ನಿತ್ಯ ಜೀವನದಲ್ಲಿ ಉಷ್ಣದ ಪರಿಣಾಮಗಳ ಅನ್ವಯ;
ಎತ್ತಿನ ಗಾಡಿಯ ಮರದ ಚಕ್ರಕ್ಕೆ ಉಕ್ಕಿನ ಪಟ್ಟಿ ಕೂರಿಸಲು ಉಷ್ಣದ ಪರಿಣಾಮವನ್ನು ಅಳವಡಿಸುತ್ತೇವೆ;ಮೊದಲು ಮರದ ಚಕ್ರವನ್ನು ತಯಾರಿಸಲಾಗುತ್ತದೆ.ನಂತರ ಮರದ ಚಕ್ರಕ್ಕಿಂತ ಸ್ವಲ್ಪ ಕಿರಿದಾದ ಉಕ್ಕಿನ ವೃತ್ತಾಕಾರದ ಪಟ್ಟಿಯನ್ನು ತಯಾರಿಸಲಾಗುತ್ತದೆ.ಉಕ್ಕಿನ ಪಟ್ಟಿಯನ್ನು ಚೆನ್ನಾಗಿ ಕಾಯಿಸಲಾಗುತ್ತದೆ.ಕಾಯಿಸಿದಾಗ ಉಕ್ಕಿನ ಪಟ್ಟಿಯ ಪರಿಧಿಯು ಮರದ ಚಕ್ರಕ್ಕಿಂತ ದೊಡ್ಡದಾಗುತ್ತದೆ.ಈಗ ಉಕ್ಕಿನ ಪಟ್ಟಿಯೊಳಗೆ ಮರದ ಚಕ್ರವನ್ನು ಜಾರಿಸಿ ತಕ್ಷಣ  ತಂಪು ಮಾಡಲಾಗುತ್ತದೆ. ತಂಪು ಮಾಡಿದಾಗ ಉಕ್ಕಿನ ಪಟ್ಟಿಯು ಕುಗ್ಗಿ, ಮರದ ಚಕ್ರವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.
ಬಿಗಿಯಾಗಿರುವ ಬಾಟಲಿಯ ಬಿರಡೆಯನ್ನು ಕಳಚಲು ಅದನ್ನು ಲಘುವಾಗಿ ಕಾಯಿಸಿ ಕಳಚಿದರೆ ಸುಲಭವಾಗಿ ಕಳೆದುಕೊಳ್ಳುತ್ತದೆ.ಇಲ್ಲಿ ಕಾಯಿಸಿದಾಗ ಬಾಟಲಿಯ ಬಿರಡಿ ಯು ಹಿಗ್ಗುತ್ತದೆ.
ಹಡಗಿನ ನಿರ್ಮಾಣದಲ್ಲಿ ರಿವೆಟ್ ಜೋಡಣೆಯಲ್ಲಿ ಉಷ್ಣದ ಪರಿಣಾಮವನ್ನು ಅನ್ವಯಿಸುತ್ತೇವೆ.
ತಾಪಮಾಪಕಗಳ ತಯಾರಿಕೆಯಲ್ಲಿ ಉಷ್ಣದ ಪರಿಣಾಮವನ್ನು ಅನ್ವಯಿಸುತ್ತೇವೆ.

ಉಷ್ಣದ ಏಕಮಾನಗಳು;
ಉಷ್ಣದ ಅಂತರಾಷ್ಟ್ರೀಯ ಏಕಮಾನ ಜೂಲ್(joule) ಆಗಿದೆ.
ಕ್ಯಾಲರಿ ಯು ಉಷ್ಣದ ಇನ್ನೊಂದು ಏಕಮಾನ .ಒಂದು ಕ್ಯಾಲರಿ ಯೂ 4.2J ಗಳಿಗೆ ಸಮವಾಗಿದೆ.
ಕಿಲೋ ಜೂಲ್ ಮತ್ತು ಕಿಲೋ ಕ್ಯಾಲರಿಗಳು ಕೂಡ ಉಷ್ಣದ ಏಕಮಾನಗಳಾಗಿವೆ.ಕಿಲೋ ಎಂದರೆ ಸಾವಿರ ಎಂದರ್ಥ.

ಸೋಮವಾರ, ಫೆಬ್ರವರಿ 7, 2022

ನೀರಿನ ಭೌತಿಕ ಮತ್ತು ರಾಸಾಯನಿಕ ಗುಣಗಳು

ನೀರು ಹೈಡ್ರೋಜನ್ ಮತ್ತು ಆಕ್ಸಿಜನ್ ಗಳಿಂದಾದ ಒಂದು ಸಂಯುಕ್ತ ವಸ್ತುವಾಗಿದೆ.
ಶುದ್ಧ ನೀರಿನ  ಭೌತಿಕ ಲಕ್ಷಣಗಳು;
ಶುದ್ಧ ನೀರು ಬಣ್ಣವಿಲ್ಲದ ಪಾರದರ್ಶಕ ದ್ರವವಾಗಿದೆ.
ಶುದ್ಧ ನೀರಿಗೆ ವಾಸನೆಯಿಲ್ಲ, ರುಚಿಯಿಲ್ಲ.
ಶುದ್ಧ ನೀರು 100 ಡಿಗ್ರಿ ಸೆಲ್ಸಿಯಸ್ ನಲ್ಲಿ ಕುದಿಯುತ್ತದೆ ಮತ್ತು 0 ಡಿಗ್ರಿ ಸೆಲ್ಸಿಯಸ್ ನಲ್ಲಿ ಘನೀಭವಿಸುತ್ತದೆ.
ನೀರು ಒಂದು ಉಷ್ಣ ಅವಾಹಕ ವಸ್ತುವಾಗಿದೆ ಆದರೆ ನೀರು ಒಂದು ಅನುಷ್ಣವಾಹಕ ವಸ್ತು.ನೀರು ವಿದ್ಯುತ್ ನ ಅವಾಹಕ.ನೀರಿನಲ್ಲಿ ಮಿಶ್ರವಾಗಿರುವ ಲವಣಗಳಿಂದಾಗಿ ನೀರಿನಲ್ಲಿ ವಿದ್ಯುತ್ ಹರಿಯುತ್ತದೆ.
ನೀರು ಅಸಂಬದ್ಧ ವಿಕಾಸವನ್ನು ತೋರಿಸುತ್ತದೆ; ಅಂದರೆ ನೀರಿನ ತಾಪವನ್ನು 4 ಡಿಗ್ರಿ ಸೆಲ್ಸಿಯಸ್ ನಿಂದ 0 ಡಿಗ್ರಿ ಸೆಲ್ಸಿಯಸ್ ನವರಿಗೆ ಇಳಿಸುವಾಗ ನೀರು ಕುಗ್ಗುವ ಬದಲು ಹಿಗ್ಗುತ್ತದೆ.
ಮಂಜುಗಡ್ಡೆ ನೀರಿನಲ್ಲಿ ತೇಲುತ್ತದೆ ಏಕೆಂದರೆ ಮಂಜುಗಡ್ಡೆಯ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆ.
ನೀರು ಒಂದು ಉತ್ತಮ ದ್ರಾವಕ ವಾಗಿದೆ. ನೀರನ್ನು ಸಾರ್ವತ್ರಿಕ ದ್ರಾವಕ ಎಂದೂ ಕರೆಯುತ್ತಾರೆ ಏಕೆಂದರೆ ನೀರಿನಲ್ಲಿ ಬಹುಪಾಲು ವಸ್ತುಗಳು ಕರಗುತ್ತವೆ.

ನೀರಿನ ರಾಸಾಯನಿಕ ಲಕ್ಷಣಗಳು;
ನೀರು ಒಂದು ತಟಸ್ಥ ದ್ರವ ಅಂದರೆ ನೀರು ಆಮ್ಲೀಯವೂ ಅಲ್ಲ ಪ್ರತ್ಯಾಮ್ಲೀಯವೂ ಅಲ್ಲ.ನೀರು ರಾಸಾಯನಿಕ ಕ್ರಿಯೆಗಳಿಗೆ ಮಾಧ್ಯಮವಾಗಿ ಮತ್ತು ಕ್ಯಾಟಲಿಸ್ಟ್ (ವೇಗವರ್ಧಕ ) ಆಗಿ ಕೆಲಸ ಮಾಡಬಲ್ಲದು.
ಪದಾರ್ಥಗಳು ನೀರಿನೊಂದಿಗೆ ಪ್ರತಿಕ್ರಿಯಿಸಿದಾಗ ಹೈಡ್ರೇಟ್ ಗಳನ್ನು ಕೊಡುತ್ತವೆ.
ನೀರು ಲೋಹಗಳೊಂದಿಗೆ ಪ್ರತಿಕ್ರಿಯಿಸಿ ಲೋಹದ ಆಕ್ಸೈಡ್ ಅಥವಾ ಲೋಹದ ಹೈಡ್ರಾಕ್ಸೈಡ್ ಗಳನ್ನು ಕೊಡುತ್ತದೆ.
ಉದಾಹರಣೆಗೆ,
2Na+2H2O→2NaOH+H2
Mg + H2O → MgO + H2

ಭಾನುವಾರ, ಫೆಬ್ರವರಿ 6, 2022

ಜೀವಿಗಳಲ್ಲಿ ಪೋಷಣೆ

ಪೋಷಣೆಯು ಜೀವ ಕ್ರಿಯೆಗಳಲ್ಲಿ ಒಂದು.
ಜೀವಿ ಜೀವಂತವಾಗಿರಲು ನಡೆಸುವ ಮೂಲ ಕ್ರಿಯೆಗಳನ್ನು ಜೀವಕ್ರಿಯೆಗಳು ಎನ್ನುತ್ತೇವೆ.

ಜೀವಿ ಸೇವಿಸಿದ ಆಹಾರವನ್ನು ಜೀರ್ಣಿಸಿ ದೇಹಗತ ಮಾಡಿಕೊಳ್ಳುವುದಕ್ಕೆ ಪೋಷಣೆ ಎನ್ನುತ್ತೇವೆ.

ಪೋಷಣೆಯ ಆಧಾರದ ಮೇಲೆ ಜೀವಿಗಳನ್ನು ಎರಡು ಬಗೆಗಳಾಗಿ ವಿಂಗಡನೆ ಮಾಡಬಹುದು, ಅವುಗಳೆಂದರೆ ಸ್ವಪೋಷಕಗಳು ಮತ್ತು ಪರಪೋಷಕಗಳು.
ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಜೀವಿಗಳನ್ನು ಸ್ವಪೋಷಕಗಳು ಎನ್ನುತ್ತೇವೆ. ಉದಾಹರಣೆಗೆ ಎಲ್ಲಾ ಹಸಿರು ಸಸ್ಯಗಳು.
ತಮ್ಮ ಆಹಾರಕ್ಕಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಸಿರು ಸಸ್ಯಗಳನ್ನು ಅವಲಂಬಿಸಿರುವ ಜೀವಿಗಳನ್ನು ಪರಪೋಷಕಗಳು ಎನ್ನುತ್ತೇವೆ.ಉದಾಹರಣೆಗೆ ಪ್ರಾಣಿಗಳು .ಕೆಲವು ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಪ್ರತ್ಯಕ್ಷವಾಗಿ ಅಂದರೆ ನೇರವಾಗಿ ಹಸಿರು ಸಸ್ಯಗಳನ್ನು ಅವಲಂಬಿಸಿರುತ್ತವೆ.ಅಂತಹ ಪ್ರಾಣಿಗಳನ್ನು ಸಸ್ಯಹಾರಿಗಳು ಎನ್ನುತ್ತೇವೆ.ಆದರೆ ಮತ್ತೆ ಕೆಲವು ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಸಸ್ಯಹಾರಿ ಪ್ರಾಣಿಗಳನ್ನು ಅವಲಂಬಿಸಿರುತ್ತವೆ ಅಂದರೆ ಪರೋಕ್ಷವಾಗಿ ಸಸ್ಯಗಳನ್ನು ಅವಲಂಬಿಸಿರುತ್ತವೆ.ಈ ಜೀವಿಗಳನ್ನು ಮಾಂಸಹಾರಿಗಳು ಎನ್ನುತ್ತೇವೆ.
ಅಲ್ಲದೆ ಪತ್ರಹರಿತು ಇಲ್ಲದ ಕಸ್ಕ್ಯೂಟ ನಾಯಿಕೊಡೆ ಮುಂತಾದ ಸಸ್ಯಗಳು ಕೂಡ ತಮ್ಮ ಆಹಾರಕ್ಕಾಗಿ ಇತರ ಜೀವಿಗಳನ್ನು ಅವಲಂಬಿರುತ್ತವೆ. ಆದ್ದರಿಂದ ಇವುಗಳನ್ನು ಕೂಡ ಪರಪೋಷಕಗಳು ಎನ್ನುತ್ತೇವೆ.

ಶನಿವಾರ, ಫೆಬ್ರವರಿ 5, 2022

ಸಸ್ಯಗಳಲ್ಲಿ ಲೈಂಗಿಕ ಸಂತಾನೋತ್ಪತ್ತಿ ( sexual reproduction).

   ಜೀವಿಗಳು  ಮರಿ ಜೀವಿಯನ್ನು ಹುಟ್ಟಿಸುವುದಕ್ಕೆ ಸಂತಾನೋತ್ಪತ್ತಿ (reproduction) ಎನ್ನುತ್ತೇವೆ
  ಸಂತಾನೋತ್ಪತ್ತಿ ಯಲ್ಲಿ ಎರಡು ವಿಧಗಳಿವೆ ;
ಲೈಂಗಿಕ ಸಂತಾನೋತ್ಪತ್ತಿ (sexual reproduction) ಮತ್ತು ನಿರ್ಲಿಂಗ ರೀತಿಯ ಸಂತಾನೋತ್ಪತ್ತಿ ( asexual reproduction).
ಲಿಂಗ ರೀತಿಯ ಸಂತಾನೋತ್ಪತ್ತಿ ಎಂದರೇನು ?
ಲಿಂಗಾಣುಗಳೆಂಬ ಏಕಕೋಶಿಯ ರಚನೆಗಳ ಸಂಯೋಗದಿಂದ ಹೊಸ ಜೀವಿ ಹುಟ್ಟುವುದಕ್ಕೆ ಲಿಂಗ ರೀತಿಯ ಸಂತಾನೋತ್ಪತ್ತಿ ಎನ್ನುತ್ತೇವೆ.
ಸಸ್ಯಗಳಲ್ಲಿ ಲಿಂಗ ರೀತಿಯ ಸಂತಾನೋತ್ಪತ್ತಿ ;
ಹೂವು ಸಸ್ಯದ ಸಂತಾನೋತ್ಪತ್ತಿಯ ಭಾಗವಾಗಿದೆ.ಪುಷ್ಪಪತ್ರ, ಪುಷ್ಪದಳಗಳು,ಕೇಸರಗಳು, ಶಲಾಕೆ ಹೂವಿನ ಭಾಗಗಳಾಗಿವೆ. ಕೇಸರಗಳಲ್ಲಿ ಪರಾಗರೇಣುಗಳಿದ್ದು ಗಂಡು ಲಿಂಗಾಣುಗಳನ್ನು ಒಳಗೊಂಡಿರುತ್ತದೆ.
ಶಲಾಕೆಯಲ್ಲಿ ಅಂಡಕೋಶವಿದ್ದು ಹೆಣ್ಣು ಲಿಂಗಾಣುವನ್ನು ಹೊಂದಿರುತ್ತದೆ.
   ಹೂವಿನಲ್ಲಿ ಎರಡು ವಿಧಗಳಿವೆ;ಏಕಲಿಂಗ ಪುಷ್ಪ ಮತ್ತು ದ್ವಿಲಿಂಗ ಪುಷ್ಪ.
ಏಕಲಿಂಗ ಪುಷ್ಪವು ಕೇಸರ ಅಥವಾ ಸಲಾಕೆಯನ್ನು ಹೊಂದಿರುತ್ತದೆ.ಕುಂಬಳದ ಹೂವು ಏಕಲಿಂಗ ಪುಷ್ಪಕ್ಕೆ ಉದಾಹರಣೆಯಾಗಿದೆ.
ದ್ವಿಲಿಂಗ ಪುಷ್ಪವು ಕೇಸರ ಮತ್ತು ಶಲಾಕೆ ಎರಡನ್ನೂ ಹೊಂದಿರುತ್ತದೆ. ಉದಾಹರಣೆಗೆ ದಾಸವಾಳ.
  ಪರಾಗಸ್ಪರ್ಶ (Pollination);ಒಂದು ಹೂವಿನಲ್ಲಿರುವ ಪರಾಗರೇಣುಗಳು ಅದೇ ಜಾತಿಯ ಹೂವಿನ ಶಾಲಾಕೆಯನ್ನು ತಲುಪುವುದಕ್ಕೆ ಪರಾಗಸ್ಪರ್ಶ ಎನ್ನುತ್ತೇವೆ.
ಪರಾಗಸ್ಪರ್ಶವು ಒಂದೇ ಹೂವಿನಲ್ಲಿ ನಡೆಯಬಹುದು ಅಥವಾ ಒಂದೇ ಜಾತಿಯ ಎರಡು ಹೂಗಳಲ್ಲಿ ನಡೆಯಬಹುದು.
ಒಂದು ಹೂವಿನಲ್ಲಿರುವ ಪರಾಗರೇಣುಗಳು ಅದೇ ಹೂವಿನ ಶಲಾಕಾಗ್ರವನ್ನು ತಲುಪುವುದಕ್ಕೆ ಸ್ವಕೀಯ ಪರಾಗಸ್ಪರ್ಶ ಎನ್ನುತ್ತೇವೆ.
ಒಂದು ಹೂವಿನಲ್ಲಿರುವ ಪರಾಗರೇಣುಗಳು ಅದೇ ಜಾತಿಯ ಬೇರೊಂದು ಹೂವಿನ ಶಲಾಕಾಗ್ರವನ್ನು ತಲುಪುವುದಕ್ಕೆ ಪರಕೀಯ ಪರಾಗಸ್ಪರ್ಶ ಎನ್ನುತ್ತೇವೆ.
ಪರಾಗಸ್ಪರ್ಶದ ಮೂಲಕ ಹೂವಿನಲ್ಲಿ ಗರ್ಭಧಾರಣೆಯಾಗುತ್ತದೆ.ಗರ್ಭಧಾರಣೆಯಾಗಿ ಅಂಡಾಶಯದಲ್ಲಿ ಬೀಜೋತ್ಪತ್ತಿ ಆಗುತ್ತದೆ.
ಈ ಬೀಜದಿಂದ ಹೊಸ ಸಸ್ಯ ಉತ್ಪತ್ತಿಯಾಗುತ್ತದೆ.

ವಿಸರ್ಜನೆ

ಜೀವಿಗಳು ಜೀವಂತವಾಗಿರಲು ಉಸಿರಾಟ ಜೀರ್ಣಕ್ರಿಯೆ ಗಳಂತಹ ಜೀವ ಕ್ರಿಯೆಗಳನ್ನು ನಡೆಸುತ್ತವೆ.ಅಂತಹ ಒಂದು ಜೀವ ಕ್ರಿಯೆಯೇ ವಿಸರ್ಜನೆ.
ಜೀವಿಗಳು ನಿರುಪಯುಕ್ತ ವಸ್ತುಗಳನ್ನು ತಮ್ಮ ದೇಹದಿಂದ ಹೊರ ಹಾಕುವುದಕ್ಕೆ ವಿಸರ್ಜನೆ ಎನ್ನುತ್ತೇವೆ.ಜೀವಿಗಳು ಹೀಗೆ ಮಾಡದಿದ್ದಲ್ಲಿ ನಿರುಪಯುಕ್ತ ವಸ್ತುಗಳು ದೇಹದಲ್ಲಿ ಉಳಿದು ವಿಷವಾಗುತ್ತದೆ.

ಸಸ್ಯಗಳಲ್ಲಿ ವಿಸರ್ಜನೆ; ಸಸ್ಯಗಳು ಕಾರ್ಬನ್ ಡೈಯಾಕ್ಸೈಡ್ ಸಸಾರಜನಕ ಟೆನಿನ್ ಆಲ್ಕಲಾಯ್ಡ್ ಮುಂತಾದ ನಿರುಪಯುಕ್ತ ವಸ್ತುಗಳನ್ನು ಹೊರಹಾಕುತ್ತವೆ.ಈ ನಿರುಪಯುಕ್ತ ವಸ್ತುಗಳು ಎಲೆ ತೊಗಟೆ ಹೂವಿನ ದಳಗಳಲ್ಲಿ ಶೇಖರವಾಗುತ್ತದೆ.ಎಲೆಗಳು,ತೊಗಟೆ, ಹೂವಿನ ದಳಗಳು ಉದುರಿದಾಗ ವಿಸರ್ಜನೆಯಾಗುತ್ತದೆ.

ಪ್ರಾಣಿಗಳಲ್ಲಿ ವಿಸರ್ಜನೆ;
ಅಮೀಬಾ , ಹೈಡ್ರಾ ಮುಂತಾದ ಸರಳ ಜೀವಿ ಗಳಲ್ಲಿ ವಿವರಣೆಯ ಮೂಲಕ ವಿಸರ್ಜನೆಯಾಗುತ್ತದೆ.ವಿಸರಣೆ ಎಂದರೆ ವಸ್ತುಗಳು ಹೆಚ್ಚು ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಚಲಿಸುವುದು.
  ಈಗ ಕೆಲ ಬಹುಕೋಶಿಯ ಜೀವಿಗಳಲ್ಲಿ ವಿಸರ್ಜನೆ ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸೋಣ.
ಪ್ಲನೇರಿಯಾ ಎಂಬ ಸಿಹಿನೀರಿನಲ್ಲಿ ವಾಸಿಸುವ ಚಪ್ಪಟೆ ಹುಳುವಿನಲ್ಲಿ ಜ್ವಾಲಾ ಕೋಶಗಳು (flame cells) ಪ್ರತ್ಯೇಕ ಕೋಶಗಳಿದ್ದು ಅವು ಕಿಡ್ನಿ ಯಂತೆ ಕಾರ್ಯನಿರ್ವಹಿಸಿ ನಿರುಪಯುಕ್ತ ವಸ್ತುಗಳನ್ನು ಹೊರಹಾಕುತ್ತವೆ.ಇದೇ ರೀತಿ ಎರೆಹುಳು ವಿನಲ್ಲಿ ನೆಫ್ರೀಡಿಯ(nephridia) ಮತ್ತು ಕೀಟಗಳಲ್ಲಿ ಮಾಲ್ಫಿಜಿಯನ್ ನಾಳಗಳು (Malpighian tubules) ಕಶೇರುಕಗಳ ಕಿಡ್ನಿಯಂತೆ ಕೆಲಸ ಮಾಡುವ ವಿಸರ್ಜನಾಂಗ ಗಳಾಗಿವೆ.

ಮಾನವನಲ್ಲಿ ವಿಸರ್ಜನೆ;
ಮಾನವನಲ್ಲಿ ಶ್ವಾಸಕೋಶಗಳು, ಮೂತ್ರಜನಕಾಂಗಗಳು ಮತ್ತು ಚರ್ಮ ವಿಸರ್ಜನಾಂಗಗಳಾಗಿವೆ.
ಶ್ವಾಸಕೋಶವೂ ಕಾರ್ಬನ್ ಡೈಆಕ್ಸೈಡ್, ನೀರು ಗಳನ್ನು ಹೊರಹಾಕುತ್ತದೆ.
ಮೂತ್ರಜನಕಾಂಗವು ಯೂರಿಯಾ,ಯೂರಿಕ್ ಆಮ್ಲ, ಲವಣಗಳು, ನೀರು ಗಳನ್ನು ವಿಸರ್ಜಿಸುತ್ತದೆ.
ಚರ್ಮವು ಯೂರಿಯಾ ಲವಣಗಳು ನೀರು ಗಳನ್ನು ವಿಸರ್ಜಿಸುತ್ತದೆ.
  ಮೂತ್ರಜನಕಾಂಗಗಳು ನೆಫ್ರಾನ್ ಗಳು ಎಂಬ ವಿಶಿಷ್ಟ ಕೋಶಗಳಿಂದ ಮಾಡಲ್ಪಟ್ಟಿದೆ.ನೆಪ್ರಾನ್ ಗಳು ರಕ್ತದಿಂದ ನಿರುಪಯುಕ್ತ ವಸ್ತುಗಳನ್ನು ಬೇರ್ಪಡಿಸುತ್ತವೆ.

ಶುಕ್ರವಾರ, ಫೆಬ್ರವರಿ 4, 2022

ವಿದ್ಯುತ್ ಶಕ್ತಿ

    ವಿದ್ಯುಚ್ಛಕ್ತಿಯು ಒಂದು ಅತ್ಯಂತ ಅನುಕೂಲಕರ ಶಕ್ತಿಯ ರೂಪವಾಗಿದೆ.ಏಕೆಂದರೆ ವಿದ್ಯುಚ್ಛಕ್ತಿಯನ್ನು ಸುಲಭವಾಗಿ ಇತರ ಶಕ್ತಿಯ ರೂಪಗಳಿಗೆ ಪರಿವರ್ತಿಸಿಕೊಳ್ಳಬಹುದು.
ವಿದ್ಯುತ್ ಶಕ್ತಿಯ ಏಕಮಾನ ಗಳಾಗಿ ಜೂಲ್ (J),ಕಿಲೋ ಜೂಲ್ (1000J), ಯೂನಿಟ್ (ಕಿಲೋವ್ಯಾಟ್ - ಗಂಟೆ) ಗಳನ್ನು ಬಳಸುತ್ತೇವೆ.ವಿದ್ಯುಚ್ಛಕ್ತಿಯ ಅಂತರಾಷ್ಟ್ರೀಯ ಏಕಮಾನ ಜೂಲ್ ಆಗಿದೆ.
ವಿದ್ಯುಚಕ್ತಿ ಏಕಮಾನ ಒಂದು ಯೂನಿಟ್ ಎಂದರೇನು ?
  ಒಂದು ಸೆಕೆಂಡಿಗೆ ಸಾವಿರ ಜೂಲ್ (1000J) ನಂತೆ ಸತತ ಒಂದು ಗಂಟೆಗಳ ಕಾಲ ಬಳಸಲ್ಪಡುವ ವಿದ್ಯುಚ್ಛಕ್ತಿಯ ಪ್ರಮಾಣಕ್ಕೆ ಒಂದು ಯೂನಿಟ್ ಎನ್ನುತ್ತೇವೆ.ಯೂನಿಟ್ ಅನ್ನು ಕಿಲೋವ್ಯಾಟ್-ಗಂಟೆ (kWh ) ನಿಂದಲೂ ಸೂಚಿಸುತ್ತೇವೆ.
ವಿದ್ಯುತ್ ಸಾಮರ್ಥ್ಯ ಎಂದರೇನು ?
ವಿದ್ಯುಚ್ಛಕ್ತಿ ಉಪಯೋಗಿಸಲ್ಪಡುವ ದರಕ್ಕೆ ವಿದ್ಯುತ್ ಸಾಮರ್ಥ್ಯ ಎನ್ನುತ್ತೇವೆ.
P =E/t  ಇಲ್ಲಿ P = ವಿದ್ಯುತ್ ಸಾಮರ್ಥ್ಯ.
                     E =ಉಪಯೋಗವಾದ ವಿದ್ಯುಚ್ಛಕ್ತಿ .
                     t=ಉಪಯೋಗಿಸಲು ತೆಗೆದುಕೊಂಡ ಕಾಲ
ವಿದ್ಯುತ್ ಸಾಮರ್ಥ್ಯದ ಏಕಮಾನ ವ್ಯಾಟ್ ಆಗಿದೆ. ಒಂದು ವ್ಯಾಟ್ = 1J/S
ವಿದ್ಯುತ್ ಪ್ರವಾಹದ ಪರಿಣಾಮಗಳು ;
ವಿದ್ಯುತ್ ಪ್ರವಾಹವು ಮೂರು ಮುಖ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ.
ಅವುಗಳೆಂದರೆ ವಿದ್ಯುತ್ ಕಾಂತಿಯ ಪರಿಣಾಮ, ವಿದ್ಯುತ್ ನ ರಾಸಾಯನಿಕ ಪರಿಣಾಮ, ವಿದ್ಯುತ್ನ ಉಷ್ಣೋತ್ಪನ್ನ ಪರಿಣಾಮ.
ವಿದ್ಯುತ್ಕಾಂತಿಯ ಪರಿಣಾಮವನ್ನು ಹೆನ್ರಿ ಕ್ರಿಶ್ಚಿಯನ್ ಓಯರ್ ಸ್ಟೆಡ್ ಪತ್ತೆಮಾಡಿದರು.ಕಾಂತತ್ವ ಮತ್ತು ವಿದ್ಯುಚ್ಛಕ್ತಿ ಜೊತೆಗೆ ಇರುತ್ತವೆ.ತಂತಿಯಲ್ಲಿ ವಿದ್ಯುತ್ ಹರಿದಾಗ ತಂತಿಯ ಸುತ್ತಲೂ ಕಾಂತಕ್ಷೇತ್ರ ಉಂಟಾಗುತ್ತದೆ. ಇದನ್ನು ವಿದ್ಯುತ್ ಕಾಂತಿಯ ಪರಿಣಾಮ ಎನ್ನುವರು.
ವಿದ್ಯುತ್ ನ ರಾಸಾಯನಿಕ ಪರಿಣಾಮ:
ವಿದ್ಯುತ್, ಕೆಲವು ರಾಸಾಯನಿಕಗಳ ಮೂಲಕ ಹರಿದಾಗ ರಾಸಾಯನಿಕ ಬದಲಾವಣೆಯನ್ನು ಉಂಟುಮಾಡುತ್ತದೆ. ಇದನ್ನು ವಿದ್ಯುತ್ನ ರಾಸಾಯನಿಕ ಪರಿಣಾಮ ಎನ್ನುತ್ತೇವೆ.ವಿದ್ಯುತ್ತಿನಿಂದ ರಾಸಾಯನಿಕ ಬದಲಾವಣೆಗೆ ಒಳಗಾಗುವ ರಾಸಾಯನಿಕಗಳನ್ನು ವಿದ್ಯುತ್ ವಿಭಾಜ್ಯ ಗಳು ಅಥವಾ ಎಲೆಕ್ಟ್ರೋಲೈಟ್ ಗಳು ಎನ್ನುತ್ತೇವೆ.ಉದಾಹರಣೆಗೆ ಅಡುಗೆ ಉಪ್ಪು,ಸಕ್ಕರೆ, ಹರಳೆಣ್ಣೆ ಇತ್ಯಾದಿ.
ವಿದ್ಯುತ್ನ ಉಷ್ಣೋತ್ಪನ್ನ ಪರಿಣಾಮ ;
ತಂತಿಯಲ್ಲಿ ವಿದ್ಯುತ್ ಹರಿದಾಗ ಸ್ವಲ್ಪ ವಿದ್ಯುಚ್ಛಕ್ತಿಯು ಉಷ್ಣವಾಗಿ ಪರಿವರ್ತನೆಯಾಗುತ್ತದೆ.ಇದನ್ನು ವಿದ್ಯುತ್ನ ಉಷ್ಣೋತ್ಪನ್ನ ಪರಿಣಾಮ ಎನ್ನುತ್ತೇವೆ.ವಿದ್ಯುತ್ ಬಲ್ಬ್ ,ಬಾಯ್ಲರ್ ,ವಿದ್ಯುತ್ ಇಸ್ತ್ರಿ ಪೆಟ್ಟಿಗೆ,  ವಿದ್ಯುತ್ ಫ್ಯೂಸ್ ಇತ್ಯಾದಿ ಉಪಕರಣಗಳು ವಿದ್ಯುತ್ ನ ಉಷ್ಣೋತ್ಪನ್ನ ಪರಿಣಾಮದ ಮೇಲೆ ಕೆಲಸ ಮಾಡುತ್ತವೆ.
  ವಿದ್ಯುತ್ ಫ್ಯೂಸ್ ಎಂದರೇನು ?
   ವಿದ್ಯುತ್ ಫ್ಯೂಸ್ ಒಂದು ಸುರಕ್ಷಾ ಸಾಧನ.ಇದು ಸೀಸ ಮತ್ತು ತವರ ದಿಂದ ಆದ ಮಿಶ್ರಲೋಹ ವಾಗಿದೆ.ಇದಕ್ಕೆ ವಿದ್ಯುತ್ ರೋಧ ಹೆಚ್ಚು ಮತ್ತು ದ್ರವನಬಿಂದು ಕಡಿಮೆಯಾಗಿದೆ.
ಇದನ್ನು ವಿದ್ಯುನ್ಮಂಡಲ ದ ಆರಂಭದಲ್ಲಿ ಜೋಡಿಸಿರುತ್ತಾರೆ. ಯಾವುದೇ ಕಾರಣಗಳಿಂದ ವಿದ್ಯುನ್ಮಂಡಲ ಕ್ಕೆ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ವಿದ್ಯುತ್ ಹರಿದು ಬಂದಾಗ ವಿದ್ಯುತ್ ಫ್ಯೂಸ್ ಕರಗಿ ವಿದ್ಯುನ್ಮಂಡಲಕ್ಕೆ ವಿದ್ಯುತ್ ಪ್ರವಾಹವನ್ನು ಕಡಿತಗೊಳಿಸುತ್ತದೆ.
ದ್ರವನಬಿಂದು ಕಡಿಮೆ ಮತ್ತು ವಿದ್ಯುತ್ ರೋಧ ಹೆಚ್ಚಿರುವುದರಿಂದ ವಿದ್ಯುತ್ ಫ್ಯೂಸ್ ಈ ಕಾರ್ಯ ಮಾಡಲು ಸಾಧ್ಯವಾಯಿತು.
ಇದರಿಂದ ವಿದ್ಯುನ್ಮಂಡಲ ಮತ್ತು ಅದರಲ್ಲಿ ಜೋಡಿಸಿರುವ ಬೆಲೆಬಾಳುವ ಉಪಕರಣಗಳು ಸುರಕ್ಷಿತವಾಗಿ ಉಳಿಯುತ್ತವೆ.ಹೀಗೆ ವಿದ್ಯುತ್ ಫ್ಯೂಸ್ ಉಂಟಾಗ ಬಹುದಾದ ದೊಡ್ಡ ಹಾನಿಯನ್ನು ತಪ್ಪಿಸುತ್ತದೆ.
ವಿದ್ಯುತ್ ಶಕ್ತಿಯ ಆಕರಗಳು ;
ವಿದ್ಯುಜ್ಜನಕ ವಿದ್ಯುತ್ತನ್ನು ಗಾಳಿ ನೀರು ಇವುಗಳ ಶಕ್ತಿಯಿಂದ ಉತ್ಪಾದಿಸುತ್ತದೆ.
ಸೌರಕೋಶಗಳು ಸೌರಶಕ್ತಿಯಿಂದ ವಿದ್ಯುತ್ ಅನ್ನು ಉತ್ಪಾದಿಸುತ್ತವೆ.
ವಿದ್ಯುತ್ ಕೋಶವು ರಾಸಾಯನಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಸಾಧನವಾಗಿದೆ.
ಶುಷ್ಕಕೋಶ ವೂ ರಾಸಾಯನಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುತ್ತದೆ.

ಬುಧವಾರ, ಫೆಬ್ರವರಿ 2, 2022

ಕಾಂತ -ಪರಿಕಲ್ಪನಾ ನಕ್ಷೆ (ಮೈಂಡ್ ಮ್ಯಾಪ್)

ಕಾಂತ ಎಂದರೇನು ?
  ತಮ್ಮ ಸುತ್ತಲೂ ಅಗೋಚರ ಬಲದ ಕ್ಷೇತ್ರವನ್ನು ಉಂಟು ಮಾಡಿಕೊಳ್ಳುವ ಕಲ್ಲುಗಳು ಮತ್ತು ಕೆಲವು ಲೋಹಗಳನ್ನು ಕಾಂತ ಎನ್ನುತ್ತೇವೆ.ಈ ಬಲವು ಇತರ ಕಾಂತಗಳು ಮತ್ತು ಕೆಲವು ಲೋಹಗಳನ್ನು ತಮ್ಮ ಕಡೆಗೆ ಸೆಳೆಯುತ್ತವೆ.
ಕಾಂತಗಳ ಆಕರ್ಷಿಸುವ ಗುಣಕ್ಕೆ ಕಾಂತತ್ವ ಅಥವಾ ಕಾಂತೀಯತೆ ಎನ್ನುತ್ತೇವೆ.ಕಾಂತ ದಿಂದ ಆಕರ್ಷಿಸಲ್ಪಡುವ ವಸ್ತುಗಳನ್ನು ಕಾಂತೀಯ ವಸ್ತುಗಳು ಎನ್ನುತ್ತೇವೆ.
ಕಾಂತ ಆಕರ್ಷಿಸದ ವಸ್ತುಗಳನ್ನು ಅಕಾಂತೀಯ ವಸ್ತುಗಳು ಎನ್ನುತ್ತೇವೆ.
ಕಾಂತಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ ನೈಸರ್ಗಿಕ ಕಾಂತ ಮತ್ತು ಕೃತಕ ಕಾಂತ.
ಮ್ಯಾಗ್ನೆಟೈಟ್ ಅದಿರನ್ನು ನೈಸರ್ಗಿಕ ಕಾಂತ ಎನ್ನುತ್ತೇವೆ.ಇದಕ್ಕೆ ನಿಯತ ಆಕಾರ ವಿರುವುದಿಲ್ಲ. ದುರ್ಬಲ ಕಾಂತತ್ವವನ್ನು ಹೊಂದಿರುತ್ತದೆ. ಇವು ಇದರ ಸಾಮಾನ್ಯ ಲಕ್ಷಣಗಳು .
ಕೃತಕ ಕಾಂತಗಳನ್ನು ಅವುಗಳ ಆಕಾರಕ್ಕೆ ತಕ್ಕಂತೆ ಕರೆಯಲಾಗುತ್ತದೆ;ದಂಡಕಾಂತ, ಲಾಳ ಕಾಂತ,ಕಾಂತ ಸೂಜಿ ಇತ್ಯಾದಿಗಳು.
ನಿಯತ ಆಕಾರ, ಪ್ರಬಲವಾದ ಕಾಂತತ್ವ, ಇವು ಕೃತಕ ಕಾಂತದ ಕೆಲವು ಸಾಮಾನ್ಯ ಲಕ್ಷಣಗಳು .
ಕೃತಕ ಕಾಂತಗಳನ್ನು ಎರಡು ವಿಧಗಳಲ್ಲಿ ತಯಾರಿಸುತ್ತಾರೆ; ಯಾಂತ್ರಿಕ ವಿಧಾನ ಮತ್ತು ವಿದ್ಯುತ್ ವಿಧಾನ.
ಯಾಂತ್ರಿಕ ವಿಧಾನದಲ್ಲಿ ದಂಡಕಾಂತದ ಒಂದೇ ತುದಿಯಿಂದ ಕಾಂತೀಕರಿಸಲ್ಪಡುವ ವಸ್ತುವನ್ನು ಒಂದೇ ದಿಕ್ಕಿನಲ್ಲಿ ಹಲವುಸಲ ಉಜ್ಜುವುದರಿಂದ ತಯಾರಿಸುತ್ತಾರೆ.
ವಿದ್ಯುತ್ ವಿಧಾನದಲ್ಲಿ ಕೃತಕ ಕಾಂತ ತಯಾರಿಕೆ;
ಬೇಕಾಗುವ ವಸ್ತುಗಳು;ಉಕ್ಕಿನ ದಂಡ,ಅವಾಹಕಾವೃತ ತಾಮ್ರದ ತಂತಿ,ವಿದ್ಯುತ್ಕೋಶ.
   ಅವಾಹಕಾವೃತ್ತ ತಾಮ್ರದ ತಂತಿಯನ್ನು ಉಕ್ಕಿನ ದಂಡದ ಸುತ್ತ ಸುತ್ತಿ.ತಂತಿಯ ತುದಿಗಳನ್ನು ವಿದ್ಯುತ್ಕೋಶದ ಧ್ರುವಗಳಿಗೆ ಸಂಪರ್ಕಿಸಿ,ವಿದ್ಯುತ್ತನ್ನು ಹರಿಸಿ .ತಂತಿಯಲ್ಲಿ ವಿದ್ಯುತ್ ಹರಿಯುವಾಗ ದಂಡವೂ ಕಾಂತ ವಾಗುತ್ತದೆ. ಇದನ್ನು ವಿದ್ಯುತ್ಕಾಂತ ಎನ್ನುತ್ತೇವೆ.

ಕಾಂತದ ಗುಣಗಳು ;
1)ಕಾಂತವು ಕಬ್ಬಿಣ ಮೊದಲಾದ ಲೋಹಗಳನ್ನು ಆಕರ್ಷಿಸುತ್ತದೆ.
2)ತೂಗುಬಿಟ್ಟ ಕಾಂತವು ಯಾವಾಗಲೂ ಉತ್ತರ ದಕ್ಷಿಣ ದಿಕ್ಕಿನಲ್ಲಿ ನಿಶ್ಚಲವಾಗುತ್ತದೆ. ಏಕೆ?
 ಇದಕ್ಕೆ ಕಾರಣ ಭೂಮಿಯು ಕಾಂತದಂತೆ ವರ್ತಿಸುತ್ತದೆ.ಭೂ ಕಾಂತಕ್ಕೂ 2 ಧ್ರುವ ಗಳಿವೆ. ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವ.ಇದರ ಕಾಂತಿಯ ಉತ್ತರ ಧ್ರುವವು ಭೌಗೋಳಿಕ ದಕ್ಷಿಣದಲ್ಲಿದೆ.ಹಾಗೂ ಕಾಂತೀಯ ದಕ್ಷಿಣಧ್ರುವ ಭೌಗೋಳಿಕ ಉತ್ತರದಲ್ಲಿದೆ.ಆದ್ದರಿಂದ ಕಾಂತ ಧ್ರುವಗಳ ನಿಯಮಾನುಸಾರ ತೂಗುಬಿಟ್ಟ ಕಾಂತ ಉತ್ತರ ದಕ್ಷಿಣ ದಿಕ್ಕಿನಲ್ಲಿ ನಿಶ್ಚಲವಾಗುತ್ತದೆ.
 ಕಾಂತು ಧ್ರುವಗಳ ನಿಯಮ ;ಸಜಾತಿಯ ಧ್ರುವಗಳು ಪರಸ್ಪರ ವಿಕರ್ಷಿಸುತ್ತವೆ.ಆದರೆ ವಿಜಾತಿಯ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ.
3)ಕಾಂತಕೆ 2 ಧ್ರುವ ಗಳಿವೆ.ಉತ್ತರ ದ್ರುವ  ಮತ್ತು ದಕ್ಷಿಣ ದ್ರುವ .
4)ಧ್ರುವಗಳಲ್ಲಿ ಕಾಂತತ್ವ ಅತ್ಯಧಿಕವಾಗಿರುತ್ತದೆ.
5)ಸಜಾತಿಯ ಧ್ರುವಗಳು ವಿಕರ್ಷಿಸುತ್ತವೆ ವಿಜಾತಿಯ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ.
6)ಕಾಂತ ದ್ರುವ ಗಳನ್ನು ಪ್ರತ್ಯೇಕ ಮಾಡಲು ಆಗದು.
7)ಒಂದೇ ಕಾಂತದ ಎರಡು ಧ್ರುವಗಳ ಆಕರ್ಷಣ ಸಾಮರ್ಥ್ಯ ಒಂದೇ ಆಗಿರುತ್ತದೆ.
8)ಕಾಂತ ವನ್ನು ಕಾಯಿಸಿದರೆ ಕಾಂತತ್ವ ನಷ್ಟವಾಗುತ್ತದೆ.

ಕಾಂತಕ್ಷೇತ್ರ;
ಕಾಂತ ಬಲವಿರುವ ಪ್ರದೇಶವನ್ನು ಕಾಂತಕ್ಷೇತ್ರ ಎನ್ನುತ್ತೇವೆ.
ಕಾಂತಕ್ಷೇತ್ರದ ಪ್ರಭಾವಕ್ಕೊಳಗಾದ ಪದಾರ್ಥಗಳ ವರ್ತನೆಯನ್ನು ಆದರಿಸಿ ಅವುಗಳನ್ನು ಮೂರು ವಿಧಗಳಾಗಿ ವಿಂಗಡಿಸುತ್ತೇವೆ ಅವುಗಳೆಂದರೆ, 1)ಡಯಾಕಾಂತಿಯ ವಸ್ತು;ಇವು ಕಾಂತೀಯ ಗುಣ ತೋರುವುದಿಲ್ಲ.
2)ಪ್ಯಾರಾ ಕಾಂತೀಯ ವಸ್ತುಗಳು;ಇವು ಕಾಂತಿಯ ಗುಣ ತೋರುತ್ತವೆ.
3)ಫೆರೋ ಕಾಂತಿಯ ವಸ್ತುಗಳು;ಸುಲಭವಾಗಿ ಕಾಂತೀಯ ಗೊಳ್ಳುತ್ತವೆ.
ಕಾಂತದ ಉಪಯೋಗಗಳು;
ಧ್ವನಿವರ್ಧಕ ಟೆಲಫೋನ್ ಡೈನಮೋ ವಿದ್ಯುತ್ ಮೋಟಾರ್ ಮೊದಲಾದ ಉಪಕರಣಗಳಲ್ಲಿ ಕಾಂತ ವನ್ನು ಬಳಸುತ್ತಾರೆ.
ಕಾಂತೀಯ ರೈಲುಗಳ ಚಾಲನೆಯಲ್ಲಿ ಬಳಸುತ್ತಾರೆ.
ಎಂ.ಆರ್.ಐ ಸ್ಕ್ಯಾನ್ ಮೂಲಕ ರೋಗನಿದಾನ ಮಾಡಲು ಬಳಸುತ್ತಾರೆ.

ಸಂಯೋಗ ಸಾಮರ್ಥ್ಯ - ರಾಸಾಯನಿಕ ಕ್ರಿಯೆ

ದಾತುವಿನ ಸಂಯೋಗ ಸಾಮರ್ಥ್ಯ ಎಂದರೇನು ?
ಧಾತುವಿನ ಪರಮಾಣುವಿನ ಬಂಧ ಸಾಮರ್ಥ್ಯವನ್ನು ಸಂಯೋಗ ಸಾಮರ್ಥ್ಯ ಎನ್ನುತ್ತೇವೆ; ಧಾತುವಿನ ಪರಮಾಣು ತನ್ನ ಇಂತಿಷ್ಟೇ ಎಲೆಕ್ಟ್ರಾನುಗಳನ್ನು ಇನ್ನೊಂದು ಪರಮಾಣುವಿಗೆ ಬಿಟ್ಟುಕೊಡುತ್ತದೆ ಅಥವಾ ಇನ್ನೊಂದು ಪರಮಾಣುವಿನಿಂದ ಇಂತಿಷ್ಟೇ ಎಲೆಕ್ಟ್ರಾನುಗಳನ್ನು ಪಡೆದುಕೊಳ್ಳುತ್ತದೆ ಅಥವಾ ಬೇರೆ ಪರಮಾಣುಗಳೊಂದಿಗೆ ತನ್ನ ಇಂತಿಷ್ಟೇ ಎಲೆಕ್ಟ್ರಾನುಗಳನ್ನು ಹಂಚಿಕೊಳ್ಳುತ್ತದೆ.
ಈ ಕ್ರಿಯೆಯನ್ನು ರಾಸಾಯನಿಕ ಕ್ರಿಯೆ ಎನ್ನುತ್ತೇವೆ.
ರಾಸಾಯನಿಕ ಕ್ರಿಯೆಯಲ್ಲಿ ಪರಮಾಣುವಿನ ವ್ಯಾಲೆನ್ಸ್ ಎಲೆಕ್ಟ್ರಾನ್ ಗಳು ಅಂದರೆ ಅತ್ಯಂತ ಹೊರಕವಚದ ಎಲೆಕ್ಟ್ರಾನ್ಗಳು ಪಾಲ್ಗೊಳ್ಳುತ್ತವೆ.
ರಾಸಾಯನಿಕ ಕ್ರಿಯೆಯ ಸಾಂಕೇತಿಕ ನಿರೂಪಣೆಯನ್ನು ರಾಸಾಯನಿಕ ಸಮೀಕರಣ ಎನ್ನುತ್ತೇವೆ.

ದ್ರವ್ಯಗಳ ಸ್ವಭಾವ -ಪರಿಕಲ್ಪನಾ ನಕ್ಷೆ (ಮೈಂಡ್ ಮ್ಯಾಪ್ )

  
ದ್ರವ್ಯರಾಶಿಯನ್ನು ಹೊಂದಿರುವ ಹಾಗೂ ಸ್ಥಳವನ್ನು ಆಕ್ರಮಿಸುವ ಯಾವುದೇ ವಸ್ತುವನ್ನು ದ್ರವ್ಯ ಎನ್ನುತ್ತೇವೆ.
ದ್ರವ್ಯವು ಅಣುಗಳಿಂದ ಮಾಡಲ್ಪಟ್ಟಿದೆ.ದ್ರವ್ಯದ ಎಲ್ಲಾ ಮೂಲ ಗುಣಗಳನ್ನು ಹೊಂದಿದ ಸ್ವತಂತ್ರ ಕಣವನ್ನು ಅಣು ಎನ್ನುತ್ತೇವೆ.
ಅನುವು ಪರಮಾಣುಗಳ ಗುಚ್ಛವಾಗಿದೆ.ಒಂದು ಅಣುವಿ ನಲ್ಲಿರುವ ಎಲ್ಲಾ ಪರಮಾಣುಗಳ ರಾಶಿಗಳ ಮೊತ್ತಕ್ಕೆ ಅಣುರಾಶಿ ಎನ್ನುತ್ತೇವೆ.
ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಬಲ್ಲ ದ್ರವ್ಯದ ಮೂಲ ಕಣಕ್ಕೆ ಪರಮಾಣು ಎನ್ನುತ್ತೇವೆ.ಪರಮಾಣು ಪ್ರೋಟಾನ್ ನ್ಯೂಟ್ರಾನ್ ಎಲೆಕ್ಟ್ರಾನ್ ಗಳಿಂದ ಮಾಡಲ್ಪಟ್ಟಿದೆ.ಒಂದು ಪರಮಾಣುವಿನಲ್ಲಿರುವ ಪ್ರೋಟಾನ್ಗಳು ಮತ್ತು ನ್ಯೂಟ್ರಾನುಗಳ ರಾಶಿಗಳ ಮೊತ್ತಕ್ಕೆ ಪರಮಾಣು ರಾಶಿ (A) ಎನ್ನುತ್ತೇವೆ.ಪರಮಾಣು ರಾಶಿಯ ಏಕಮಾನ amu ಆಗಿದೆ (ಕಾರ್ಬನ್-12 ಪರಮಾಣುವಿನ ದ್ರವ್ಯರಾಶಿಯ 1/12).
ಪರಮಾಣುವಿನ ಬೀಜಕೇಂದ್ರ ದಲ್ಲಿ ಪ್ರೋಟಾನ್ಗಳು ಮತ್ತು ನ್ಯೂಟ್ರಾನ್ ಗಳು ಬಂಧಿಸಲ್ಪಟ್ಟಿರುತ್ತವೆ.
ಎಲೆಕ್ಟ್ರಾನ್ ಗಳು ಬೀಜ ಕೇಂದ್ರದ ಸುತ್ತಲೂ ವಿವಿಧ ಕಕ್ಷೆಗಳಲ್ಲಿ ಸುತ್ತುತ್ತಿರುತ್ತವೆ.ಕಕ್ಷೆಗಳನ್ನು K,L,M,N ಕಕ್ಷೆಗಳು ಎಂದು ವರ್ಗೀಕರಿಸಲಾಗಿದೆ. K ಕಕ್ಷೆಯು 1s ಎಂಬ ಉಪಕಕ್ಷೆ ಹೊಂದಿದೆ. L ಕಕ್ಷೆಯು 2s,2p ಎಂಬ ಉಪ ಕಕ್ಷೆಗಳನ್ನು ಹೊಂದಿದೆ.M ಕಕ್ಷೆಯು 3s,3p,3d ಎಂಬ ಉಪ ಕಕ್ಷೆಗಳನ್ನು ಹೊಂದಿದೆ.
N ಕಕ್ಷೆಯು 4s,4p,4d,4f ಎಂಬ ಉಪ ಕಕ್ಷೆಗಳನ್ನು ಹೊಂದಿದೆ.
ಎಲೆಕ್ಟ್ರಾನ್ ವಿನ್ಯಾಸ ;
ಯಾವ ಯಾವ ಕಕ್ಷೆಗೆ ಎಷ್ಟೆಷ್ಟು ಎಲೆಕ್ಟ್ರಾನ್ಗಳು ಹಂಚಲ್ಪಟ್ಟಿವೆ ಎಂಬುದನ್ನು ತಿಳಿಸುವ ಬರಹಕ್ಕೆ ಎಲೆಕ್ಟ್ರಾನ್ ವಿನ್ಯಾಸ ಎನ್ನುತ್ತೇವೆ.
ಒಂದು ಪ್ರಧಾನ ಕಕ್ಷೆಯಲ್ಲಿ 2n² ರಷ್ಟು ಎಲೆಕ್ಟ್ರಾನ್ ಗಳು ತುಂಬಲ್ಪಡುತ್ತವೆ.ಇಲ್ಲಿ n ಎಂಬುದು ಪ್ರಧಾನ ಕಕ್ಷೆಯ ಸಂಖ್ಯೆಯಾಗಿದೆ.
ಅತ್ಯಂತ ಹೊರ ಕವಚವು ns²np⁶ ವಿನ್ಯಾಸ ಹೊಂದಿರುವುದನ್ನು ಅಷ್ಟಕ ಜೋಡಣೆ ಎನ್ನುತ್ತೇವೆ.ಅಷ್ಟಕ ಜೋಡಣೆಯನ್ನು ಹೊಂದಿರುವ ಧಾತುಗಳನ್ನು ಜಡ ಅನಿಲಗಳು ಅಥವಾ ಸೊನ್ನೆ ಗುಂಪಿನ ಧಾತುಗಳು ಎನ್ನುತ್ತೇವೆ.

ಒಂದು ಅಣು ಅಥವಾ ಪರಮಾಣು ಎಲೆಕ್ಟ್ರಾನ್ ಅನ್ನು ಕಳೆದುಕೊಂಡಾಗ ಅಥವಾ ಪಡೆದುಕೊಂಡಾಗ ವಿದ್ಯುತ್ ಅಂಶಯುಕ್ತ ಕಣ ವಾಗುತ್ತದೆ.ಈ ಕಣಗಳನ್ನು ಅಯಾನುಗಳು ಎನ್ನುತ್ತೇವೆ.
ಅಣು ಅಥವಾ ಪರಮಾಣು ಎಲೆಕ್ಟ್ರಾನ್ ಅನ್ನು ಪಡೆದುಕೊಂಡು ಉಂಟಾದ ಅಯಾನು ಗಳಿಗೆ ಆ್ಯನಯಾನು ಎನ್ನುತ್ತೇವೆ.
ಅಣು ಅಥವಾ ಪರಮಾಣು ಎಲೆಕ್ಟ್ರಾನ್ ಅನ್ನು ಕಳೆದುಕೊಂಡು ಉಂಟಾದ ಅಯಾನು ಗಳಿಗೆ ಕ್ಯಾಟಯಾನು ಎನ್ನುತ್ತೇವೆ.

ದ್ರವ್ಯದ ಸ್ವರೂಪ ಮತ್ತು ಸಂಯೋಜನೆ -ಪರಿಕಲ್ಪನಾ ನಕ್ಷೆ.

  ದ್ರವ್ಯವು 2 ಸ್ವಭಾವಗಳನ್ನು ಹೊಂದಿದೆ;
ದ್ರವ್ಯ ಸ್ಥಳವನ್ನು ಆಕ್ರಮಿಸುತ್ತದೆ.
ದ್ರವ್ಯವು ದ್ರವ್ಯರಾಶಿಯನ್ನು ಹೊಂದಿದೆ.
ದ್ರವ್ಯವು ಅಣುಗಳಿಂದ ಮಾಡಲ್ಪಟ್ಟಿದೆ;ವಸ್ತುವಿನ ಎಲ್ಲಾ ಮೂಲ ಗುಣಗಳನ್ನು ಹೊಂದಿರುವ ಅತ್ಯಂತ ಸೂಕ್ಷ್ಮ ಕಣಕ್ಕೆ ಅಣು ಎನ್ನುತ್ತೇವೆ.
  ಅಣುಗಳ ಜೋಡಣೆಯ ಆಧಾರದ ಮೇಲೆ ದ್ರವ್ಯವನ್ನು 4 ವಿಧಗಳಾಗಿ ವರ್ಗೀಕರಿಸುತ್ತಾರೆ;
ಅಣುಗಳು ಒತ್ತೊತ್ತಾಗಿ ವ್ಯವಸ್ಥಿತವಾಗಿ ಜೋಡಣೆ ಯಾಗಿದ್ದರೆ ಆ ದ್ರವ್ಯವನ್ನು ಘನ ದ್ರವ್ಯ ಎನ್ನುತ್ತೇವೆ.
   ಅಣುಗಳು ಒತ್ತೊತ್ತಾಗಿ ಆದರೆ ವ್ಯವಸ್ಥಿತ ವಲ್ಲದ ರೀತಿಯಲ್ಲಿ ಜೋಡಣೆ ಗೊಂಡಿದ್ದರೆ ಆ ದ್ರವ್ಯವನ್ನು ದ್ರವ ಎನ್ನುತ್ತೇವೆ.
   ಅಣುಗಳು ವಿರಳವಾಗಿದ್ದು ಸ್ವತಂತ್ರ ಚಲನೆಯಲ್ಲಿ ಇದ್ದರೆ ಆ ದ್ರವ್ಯವನ್ನು ಅನಿಲ ಎನ್ನುತ್ತೇವೆ.
   ಅಣುಗಳು ವಿರಳವಾಗಿದ್ದು ಸ್ವತಂತ್ರ ಚಲನೆಯಲ್ಲಿದ್ದು ವಿದ್ಯುದಂಶ ಹೊಂದಿದ್ದರೆ ಆ ದ್ರವ್ಯವನ್ನು ಪ್ಲಾಸ್ಮಾ ಎನ್ನುತ್ತೇವೆ.

   ಅಣುಗಳು ಪರಮಾಣುಗಳೆಂಬ ಸೂಕ್ಷ್ಮ ಕಣಗಳಿಂದ ಮಾಡಲ್ಪಟ್ಟಿದೆ.ಪರಮಾಣುಗಳು ಪ್ರೋಟಾನ್ ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಗಳೆಂಬ  ಮೂಲಭೂತ ಕಣಗಳಿಂದ ಮಾಡಲ್ಪಟ್ಟಿದೆ.
   ದ್ರವ್ಯ ದಲ್ಲಿನ ಪರಮಾಣುಗಳು ಒಂದೇ ರೀತಿಯವು ಆದರೆ ಆ ದ್ರವ್ಯವನ್ನು ಮೂಲವಸ್ತು ಅಥವಾ ಧಾತು ಎನ್ನುತ್ತೇವೆ.
ಯಾವುದೇ ಮೂಲವಸ್ತುವಿನ ಒಂದು ಪರಮಾಣುವಿನಲ್ಲಿರುವ ಪ್ರೋಟಾನ್ ಗಳ ಸಂಖ್ಯೆಯನ್ನು ಆ ದಾತುವಿನ ಪರಮಾಣು ಸಂಖ್ಯೆ (Z) ಎನ್ನುತ್ತೇವೆ.ದಾತುವಿನ ಒಂದು ಪರಮಾಣುವಿನಲ್ಲಿರುವ ಪ್ರೋಟಾನ್ ಗಳ ಸಂಖ್ಯೆಯು ಎಲೆಕ್ಟ್ರಾನ್ ಗಳ ಸಂಖ್ಯೆಗೆ ಸಮವಾಗಿರುತ್ತದೆ.

  ಒಂದಕ್ಕಿಂತ ಹೆಚ್ಚು ಬಗೆಯ ಪರಮಾಣುಗಳು ರಾಸಾಯನಿಕ ಸಂಯೋಜನೆಗೊಂಡಿದ್ದರೆ ಆ ದ್ರವ್ಯವನ್ನು ಸಂಯುಕ್ತ ಎನ್ನುತ್ತೇವೆ.

  ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಗೆಯ ದ್ರವ್ಯಗಳ ಭೌತಿಕ ಬೆರಕೆ ಯಾಗಿದ್ದರೆ ಆ ದ್ರವ್ಯವನ್ನು ಮಿಶ್ರಣ ಎನ್ನುತ್ತೇವೆ.ಮಿಶ್ರಣವನ್ನು ಸಮಜಾತ್ಯ ಮಿಶ್ರಣ ಮತ್ತು ಅಸಮಜಾತ್ಯ ಮಿಶ್ರಣ ಎಂಬುದಾಗಿ ವರ್ಗೀಕರಿಸಬಹುದು.ಸಮಜಾತ್ಯ ಮಿಶ್ರಣವನ್ನು ದ್ರಾವಣ ಎನ್ನುತ್ತೇವೆ. ದ್ರಾವಣದಲ್ಲಿ ದ್ರಾವಕ ಮತ್ತು ದ್ರಾವ್ಯ ಇರುತ್ತದೆ.ಕರಗಿಸಿಕೊಳ್ಳುವ ವಸ್ತುವನ್ನು ದ್ರಾವಕ ಎನ್ನುತ್ತೇವೆ.ದ್ರಾವಕ ದಲ್ಲಿ ಕರಗುವ ವಸ್ತುವನ್ನು ದ್ರಾವ್ಯ ಎನ್ನುತ್ತೇವೆ.ಸಕ್ಕರೆ ದ್ರಾವಣ, ಉಪ್ಪಿನ ದ್ರಾವಣ ಇತ್ಯಾದಿ ದ್ರಾವಣಕ್ಕೆ ಉದಾಹರಣೆಗಳಾಗಿವೆ.
ಅಸಮಜಾತ್ಯ ಮಿಶ್ರಣವನ್ನು ಮಡ್ಡಿ ಮಿಶ್ರಣ ಎನ್ನುತ್ತೇವೆ.ನೀರು ಮತ್ತು ಮಣ್ಣಿನ ಮಿಶ್ರಣವು ಮಡ್ಡಿ ಮಿಶ್ರಣಕ್ಕೆ ಉದಾಹರಣೆಯಾಗಿದೆ.

ಮಂಗಳವಾರ, ಫೆಬ್ರವರಿ 1, 2022

ಮರದ ಇದ್ದಿಲು- ಪರಿಕಲ್ಪನಾ ನಕ್ಷೆ (ಮೈಂಡ್ ಮ್ಯಾಪ್)

ಮರದ ಇದ್ದಿಲಿನ ಲಕ್ಷಣಗಳು;
ಮರದ ಇದ್ದಿಲು ಮೃದುವಾದ ಘನವಸ್ತು.
ಮರದ ಇದ್ದಿಲು ಕಪ್ಪಾಗಿದ್ದು ವಿದ್ಯುತ್ ಅವಾಹಕ ವಾಗಿರುತ್ತದೆ.
ನೀರಿನಲ್ಲಿ ತೇಲುತ್ತದೆ.
ಅನಿಲಗಳನ್ನು ಹೀರಿಕೊಳ್ಳುತ್ತದೆ.
ಮರದ ಇದ್ದಿಲನ್ನು ಪಡೆಯುವಿಕೆ;
ಮರದ ತುಂಡನ್ನು ಉಳಿಸಿ ಮರದ ಇದ್ದಿಲನ್ನು ಪಡೆಯುತ್ತಾರೆ.
ಮರದ ಇದ್ದಿಲಿನ ರಾಸಾಯನಿಕ ಲಕ್ಷಣಗಳು;
ಮರದ ಇದ್ದಿಲು ಹೇರಳವಾದ ಆಕ್ಸಿಜನ್ ನೊಂದಿಗೆ ಪ್ರತಿಕ್ರಿಯಿಸಿ ಕಾರ್ಬನ್ ಡೈಯಾಕ್ಸೈಡ್ ಅನ್ನು ಉತ್ಪಾದಿಸುತ್ತದೆ.
C+ O2 ----->CO2î
ಮರದ ಇದ್ದಿಲು ಮಿತವಾದ ಆಕ್ಸಿಜನ್ ನೊಂದಿಗೆ ಪ್ರತಿಕ್ರಿಯಿಸಿ ಕಾರ್ಬನ್ ಮಾನಾಕ್ಸೈಡ್ ಅನ್ನು ಬಿಡುಗಡೆಗೊಳಿಸುತ್ತದೆ.
2C+O2 ---->2COî

ಮರದ ಇದ್ದಿಲಿನ ಉಪಯೋಗಗಳು;
ಮರದ ಇದ್ದಿಲನ್ನು ಇಂಧನವಾಗಿ ಬಳಸುತ್ತಾರೆ.
ಮರದ ಇದ್ದಿಲನ್ನು ಬಂದೂಕು ಮತ್ತು ಪಟಾಕಿ ಮದ್ದುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ನೀರಿನ ಶುದ್ಧೀಕರಣ ಘಟಕಗಳಲ್ಲಿ ಬಳಸುತ್ತಾರೆ.
ಅನಿಲ ಮುಖವಾಡ ಗಳಲ್ಲಿ ಬಳಸುತ್ತಾರೆ.
 ಕ್ಯಾಲ್ಸಿಯಂ ಕಾರ್ಬೈಡ್ ( CaC2) ಮತ್ತು ಸಿಲಿಕಾನ್ ಕಾರ್ಬೈಡ್ (SiC) ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಭಾನುವಾರ, ಜನವರಿ 30, 2022

ಚಲನೆ - ಪರಿಕಲ್ಪನಾ ನಕ್ಷೆ

[ಈ ಲೇಖನವನ್ನು ಚಲನೆಯ ಮೈಂಡ್ ಮ್ಯಾಪ್ ಅನ್ನು ಉಪಯೋಗಿಸಿಕೊಂಡು ಬರೆಯಲಾಗಿದೆ.]

ಚಲನೆ:ಕಾಲದೊಂದಿಗೆ ವಸ್ತುವಿನ ಸ್ಥಾನ ಬದಲಾವಣೆ ಯನ್ನು ಚಲನೆ ಎನ್ನುತ್ತೇವೆ.

ಚಲನೆಗೆ ಸಂಬಂಧಿಸಿದ ಕೆಲವು ಅಂಶಗಳು;
ಚಲಿಸಿದ ದೂರ; ಕಾಯವು ಚಲಿಸಿದ ಪಥದ ಉದ್ದವನ್ನು ಚಲಿಸಿದ ದೂರ ಎನ್ನುತ್ತೇವೆ.
 ಸ್ಥಾನ ಪಲ್ಲಟ ; ಕಾಯವೊಂದು ಚಲಿಸಿದಾಗ ಅದರ ಆರಂಭ ಸ್ಥಾನದಿಂದ ಅಂತಿಮ ಸ್ಥಾನಕ್ಕಿರುವ ಕನಿಷ್ಠ ದೂರವನ್ನು ಸ್ಥಾನಪಲ್ಲಟ ಎನ್ನುತ್ತೇವೆ.
ಜವ; ಏಕಮಾನ ಕಾಲದಲ್ಲಿ ಕಾಯವು ಚಲಿಸಿದ ದೂರಕ್ಕೆ ಜವ ಎನ್ನುತ್ತೇವೆ. ಜವದ ಅಂತರಾಷ್ಟ್ರೀಯ ಏಕಮಾನ ಮೀಟರ್ ಪರ್ ಸೆಕೆಂಡ್ ಆಗಿದೆ.
ಜವ= ಚಲಿಸಿದ ದೂರ ÷ ಕಾಲ
ವೇಗ ; ಕಾಯ ಚಲಿಸಿದಾಗ ಏಕಮಾನ ಕಾಲದಲ್ಲಾದ ಸ್ಥಾನಪಲ್ಲಟಕ್ಕೆ ಅಥವಾ ಸ್ಥಾನ ಬದಲಾವಣೆಯ ದರಕ್ಕೆ ವೇಗ ಎನ್ನುತ್ತೇವೆ.
ವೇಗ = ಸ್ಥಾನ ಪಲ್ಲಟ ÷ ಕಾಲ
ವೇಗೋತ್ಕರ್ಷ (a) ; ವೇಗ ಬದಲಾವಣೆಯ ದರಕ್ಕೆ ವೇಗೋತ್ಕರ್ಷ ಎನ್ನುತ್ತೇವೆ.
a =ವೇಗದಲ್ಲಿ ಆದ ಬದಲಾವಣೆ ÷ ಬದಲಾವಣೆಯಾಗಲು ತೆಗೆದುಕೊಂಡ ಕಾಲ

[ಈ ಲೇಖನವನ್ನು ಚಲನೆಯ ಮೈಂಡ್ ಮ್ಯಾಪ್ ಅನ್ನು ಉಪಯೋಗಿಸಿಕೊಂಡು ಬರೆಯಲಾಗಿದೆ.]

ಚಲನೆಯ ಸಮೀಕರಣಗಳು (a = v - u ÷ t);
1) v = u + at
2) s = ut+1/2 at²
3) v² = u² + 2as
ಇಲ್ಲಿ ; a =ವೇಗೋತ್ಕರ್ಷ
u =ಆರಂಭಿಕ ವೇಗ
v =ಅಂತಿಮ ವೇಗ
t =ಕಾಲ
s = ಚಲಿಸಿದ ದೂರ ಅಥವಾ ಸ್ಥಾನಪಲ್ಲಟ

ಆವರ್ತಕ ಚಲನೆ;
ಸಮಾನ ಕಾಲಾಂತರದಲ್ಲಿ ಪುನರಾವರ್ತಿತ ಚಲನೆಯನ್ನು ಆವರ್ತಕ ಚಲನೆ ಎನ್ನುವರು.
ಆವರ್ತಕ ಚಲನೆಯನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು;ಅವುಗಳೆಂದರೆ ಆಂದೋಲ ಚಲನೆ ಮತ್ತು ತರಂಗ ಅಥವಾ ಅಲೆ ಚಲನೆ.

ಆಂದೋಲ ಚಲನೆ;ಹಿಂದಕ್ಕೂ ಮುಂದಕ್ಕೂ ತೊನೆದಾಡುವ ರೀತಿಯ ಚಲನೆಯನ್ನು ಆಂದೋಲ ಚಲನೆ ಎನ್ನುವರು.
 ಒಂದು ಆಂದೋಲ :ಆಂದೋಲ ಚಲನೆಯಲ್ಲಿರುವ ಕಾಯವು ತನ್ನ ಸಮತೋಲನ ಸ್ಥಾನದಿಂದ ಯಾವ ದಿಕ್ಕಿನಲ್ಲಿ ಚಲಿಸಲಾರಂಭಿಸುತ್ತದೆಯೋ ಅದೇ ದಿಕ್ಕಿನಲ್ಲಿ ಪುನಹ ಸಮತೋಲನ ಸ್ಥಾನವನ್ನು ದಾಟಲಾರಂಭಿಸಿದಾಗ ಒಂದು ಆಂದೋಲ ಪೂರ್ಣವಾಗುತ್ತದೆ.
ಆಂದೋಲನ ಅವಧಿ (T) ; ಒಂದು ಆಂದೋಲ ಕ್ಕೆ ಕಾಯ ತೆಗೆದುಕೊಳ್ಳುವ ಸಮಯವನ್ನು ಆಂದೋಲನ ಅವಧಿ ಎಂದು ಕರೆಯುತ್ತಾರೆ.ಆಂದೋಲ ಅವಧಿಯ ಅಂತರಾಷ್ಟ್ರೀಯ ಏಕಮಾನ ಸೆಕೆಂಡ್ (S) ಆಗಿದೆ.
ಆಂದೋಲ ದ ಆವೃತ್ತಿ;  ಒಂದು ಸೆಕೆಂಡ್ ನಲ್ಲಿ ಆಗುವ ಆಂದೋಲ ಗಳ ಸಂಖ್ಯೆಯನ್ನು ಆಂದೋಲ ಆವೃತ್ತಿ ಎನ್ನುತ್ತೇವೆ.ಆಂದೋಲ ದ ಆವೃತ್ತಿಯ ಅಂತರಾಷ್ಟ್ರೀಯ ಏಕಮಾನ ಹರ್ಟ್ಸ್ (Hz) ಆಗಿದೆ.
ಆಂದೋಲದ ಪಾರ; ಸಮತೋಲನ ಸ್ಥಾನದಿಂದ ಗರಿಷ್ಠ ಸ್ಥಾನಪಲ್ಲಟ ಸ್ಥಾನಕಿರುವ ಅಂತರವನ್ನು ಆಂದೋಲದ ಪಾರ ಎನ್ನುವರು.

ಸರಳ ಲೋಲಕ :
ಹಗುರವಾದ ವಿಸ್ತರಿಸಲಾಗಿದೆ ತಿರುಚಿ ಕೊಳ್ಳದ ದಾರದ ನೆರವಿನಿಂದ ತೂಗಾಡುತ್ತಿರುವ ಬಿಂದು ರಾಶಿಯನ್ನು ಸರಳ ಲೋಲಕ ಎನ್ನುವರು.
ಸರಳ ಲೋಲಕದ ಮೂರು ನಿಯಮಗಳು ;
I.ಲೋಲಕದ ಆಂದೋಲ ಅವಧಿ ಆಂದೋಲನದ ಪಾರವನ್ನು ಅವಲಂಬಿಸಿರುವುದಿಲ್ಲ.
II.ಆಂದೋಲ ಅವಧಿಯು ಲೋಲಕದ ಗುಂಡಿನ ರಾಶಿ,ತೂಕ,ಸಾಂದ್ರತೆಗಳನ್ನು ಅವಲಂಬಿಸಿರುವುದಿಲ್ಲ.
III. √L/T ಒಂದು ಸ್ಥಿರ. ಇಲ್ಲಿ L= ಲೋಲಕದ ಉದ್ದ T = ಆಂದೋಲಾವಧಿ.
  ಸರಳ ಲೋಲಕದ ಉಪಯೋಗಗಳು;
ಸರಳ ಲೋಲಕ ವನ್ನು ಯಾಂತ್ರಿಕ ಗಡಿಯಾರಗಳಲ್ಲಿ ಬಳಸುತ್ತಾರೆ.
ಸರಳ ಲೋಲಕ ವನ್ನು ಗುರುತ್ವ ವೇಗೋತ್ಕರ್ಷದ ಪತ್ತೆ ಮಾಡುವಿಕೆಯಲ್ಲಿ ಬಳಸುತ್ತಾರೆ.

ತರಂಗ ಅಥವಾ ಅಲೆ ಚಲನೆ;
ಶಕ್ತಿಯನ್ನು ಹೊತ್ತ ಆವರ್ತಕ ಕ್ಷುಬ್ಧತೆಯ ಪ್ರಸರಣವೇ ತರಂಗ ಚಲನೆ.
ತರಂಗದ ವಿಧಗಳು;
ತರಂಗಗಳಲ್ಲಿ ಎರಡು ವಿಧಗಳಿವೆ;
1.ಅಡ್ಡ ತರಂಗ ;ಮಾಧ್ಯಮದ ಕಣಗಳ ಕಂಪನವು ತರಂಗ ಪ್ರಸರಣದ ದಿಕ್ಕಿಗೆ ಲಂಬ ವಾಗಿದ್ದರೆ ಆ ತರಂಗವನ್ನು ಅಡ್ಡತರಂಗ ಎನ್ನುವರು.ಉದಾಹರಣೆಗೆ ನೀರಿನ ತರಂಗ.
2.ನೀಳತರಂಗ ;ಮಾಧ್ಯಮ ದ ಕಣಗಳ ಕಂಪನವು ತರಂಗ ಪ್ರಸರಣದ ದಿಕ್ಕಿನಲ್ಲಿದ್ದರೆ ಆ ತರಂಗವನ್ನು ನೀಳತರಂಗ ಎನ್ನುವರು.ಉದಾಹರಣೆಗೆ ಧ್ವನಿ ತರಂಗ.
ತರಂಗ ಚಲನೆಗೆ ಸಂಬಂಧಿಸಿದ ಅಂಶಗಳು;
ತರಂಗದ ಉದ್ದ (λ); ತರಂಗದ 2 ಅನುಕ್ರಮ ಶೃಂಗಗಳ ನಡುವಿನ ಅಂತರವನ್ನು ತರಂಗದ ಉದ್ದ ಎನ್ನುವರು.
ತರಂಗದ ವೇಗ (V);
V= nλ ಇಲ್ಲಿ n = ಕಂಪನಾಂಕ (ಆವೃತ್ತಿ ) λ= ತರಂಗದ ಉದ್ದ.

[ಈ ಲೇಖನವನ್ನು ಚಲನೆಯ ಮೈಂಡ್ ಮ್ಯಾಪ್ ಅನ್ನು ಉಪಯೋಗಿಸಿಕೊಂಡು ಬರೆಯಲಾಗಿದೆ.]

ಶನಿವಾರ, ಜನವರಿ 29, 2022

ಕ್ಯಾಲ್ಸಿಯಂ ಕಾರ್ಬೈಡ್ ( CaC2) ಪರಿಕಲ್ಪನಾ ನಕ್ಷೆ ( ಮೈಂಡ್ ಮ್ಯಾಪ್ )

<img src="mind map of calcium carbide.png" alt="concept of calcium carbide">


ಕ್ಯಾಲ್ಸಿಯಂ ಕಾರ್ಬೈಡ್ ನ ಘಟಕಗಳು ಕ್ಯಾಲ್ಸಿಯಂ ಮತ್ತು ಕಾರ್ಬನ್ ಗಳಾಗಿವೆ.

ಕ್ಯಾಲ್ಸಿಯಂ ಕಾರ್ಬೈಡ್ ನ ತಯಾರಿಕೆ;
ಸುಮಾರು 2,200 °C (3,990 °F) ನಲ್ಲಿ ಸುಣ್ಣ ಮತ್ತು ಕೋಕ್ ಮಿಶ್ರಣದಿಂದ ಎಲೆಕ್ಟ್ರಿಕ್ ಆರ್ಕ್ ಫರ್ನೇಸ್‌ನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಕೈಗಾರಿಕಾವಾಗಿ ಉತ್ಪಾದಿಸಲಾಗುತ್ತದೆ. ಇದು ಎಂಡೋಥರ್ಮಿಕ್ ಪ್ರತಿಕ್ರಿಯೆಯಾಗಿದ್ದು, ಪ್ರತಿ ಮೋಲ್‌ಗೆ 110 ಕಿಲೋಕ್ಯಾಲರಿಗಳು (460 KJ ) ಮತ್ತು ಇಂಗಾಲದ ಮಾನಾಕ್ಸೈಡ್ ಅನ್ನು ಓಡಿಸಲು ಹೆಚ್ಚಿನ ತಾಪಮಾನದ ಅಗತ್ಯವಿರುತ್ತದೆ.
 CaO + 3 C → CaC2 + CO.

ಕ್ಯಾಲ್ಸಿಯಂ ಕಾರ್ಬೈಡ್ ನ ಲಕ್ಷಣಗಳು;
ಕ್ಯಾಲ್ಸಿಯಂ ಕಾರ್ಬೈಡ್ ಒಂದು ಘನ ವಸ್ತುವಾಗಿದೆ.
ಕ್ಯಾಲ್ಸಿಯಂ ಕಾರ್ಬೈಡ್ ತೇವಾಂಶವನ್ನು ಹೀರುತ್ತದೆ.
ಕ್ಯಾಲ್ಸಿಯಂ ಕಾರ್ಬೈಡ್ ಬಾಷ್ಪಶೀಲವಲ್ಲ ಮತ್ತು ಯಾವುದೇ ತಿಳಿದಿರುವ ದ್ರಾವಕದಲ್ಲಿ ಕರಗುವುದಿಲ್ಲ ಮತ್ತು ಅಸಿಟಿಲೀನ್ ಅನಿಲ ಮತ್ತು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಅನ್ನು ನೀಡಲು ನೀರಿನೊಂದಿಗೆ ಪ್ರತಿಕ್ರಿಯಿಸುತ್ತದೆ.
CaC2(s) + 2H2O(aq) → C2H2(g) + Ca(OH)2(aq)

ಕ್ಯಾಲ್ಸಿಯಂ ಕಾರ್ಬೈಡ್ ನ ಉಪಯೋಗಗಳು;
ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಅಸಿಟಲಿನ್ ಆಕರವಾಗಿ ಉಪಯೋಗಿಸುತ್ತೇವೆ.
ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಕ್ಯಾಲ್ಸಿಯಂ ಸೈನಮೈಡ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.
CaC2 + N2 → CaCN2 + C
 ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಉಕ್ಕಿನ ತಯಾರಿಕೆಯಲ್ಲಿ ಕಬ್ಬಿಣದ ಡೀಸಲ್ಫರೈಸೇಶನ್ ನಲ್ಲಿ ಬಳಸಲಾಗುತ್ತದೆ.

ಗುರುವಾರ, ಜನವರಿ 27, 2022

ಪ್ರಾಣಿಗಳಲ್ಲಿ ಸಾಗಾಣಿಕೆ - ಪರಿಕಲ್ಪನಾ ನಕ್ಷೆ.

<img src="Transportation in animals.png" alt="mind map explaining circulatory system">

   
 ದೇಹದೊಳಗೆ ವಸ್ತುಗಳನ್ನು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕೊಂಡೊಯ್ಯುವ ಪ್ರಕ್ರಿಯೆಗೆ ಸಾಗಾಣಿಕೆ ಎನ್ನತ್ತೇವೆ. ದೇಹದೊಳಗೆ ಆಹಾರ, ನೀರು, ಆಕ್ಸಿಜನ್, ತ್ಯಾಜ್ಯಗಳು ಸಾಗಿಸಲ್ಪಡುತ್ತವೆ. ಪರಿಚಲನಾಪ್ಯೂಹವು ಮಾನವನಾ ಪ್ರಧಾನ ಸಾಗಾಣಿಕಾ ವ್ಯವಸ್ಥೆಯಾಗಿದೆ. ಪರಿಚಲನಾವ್ಯೂಹವು ರಕ್ತ, ರಕ್ತನಾಳಗಳು ಮತ್ತು ಹೃದಯವನ್ನು ಒಳಗೊಂಡಿದೆ.
ರಕ್ತವು ರಕ್ತನಾಳಗಳಲ್ಲಿ ಹರಿಯುವ ದ್ರವರೂಪದ ವಸ್ತುವಾಗಿದೆ. ರಕ್ತವು, ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಕಿರುತಟ್ಟೆಗಳು ಮತ್ತು ಪ್ಲಾಸ್ಮ ಗಳನ್ನು ಒಳಗೊಂಡಿದೆ. ರಕ್ತದ ಪ್ರಮುಖ ಕಾರ್ಯ ಸಾಗಾಣಿಕೆ. ರಕ್ತವು ಆಕ್ಸಿಜನ್, ಜೀರ್ಣವಾದ ಆಹಾರ (ಗ್ಲುಕೋಸ್), ತ್ಯಾಜ್ಯ( ಕಾರ್ಬನ್ ಡೈ ಆಕ್ಸೈಡ್, ಯೂರಿಯಾ ಮುಂತಾದ ಲವಣಗಳು)ಗಳನ್ನು ಸಾಗಿಸುತ್ತದೆ.
ಕೆಂಪು ರಕ್ತಕಣಗಳು ಹೀಮೋಗ್ಲೋಬಿನ್ ಎಂಬ ವರ್ಣಕವನ್ನು ಹೊಂದಿದ್ದು ರಕ್ತದ ಕೆಂಪು ಬಣ್ಣಕ್ಕೆ ಕಾರಣವಾಗಿದೆ. ಕೆಂಪು ರಕ್ತಕಣಗಳು ಆಕ್ಸಿಜನ್ ಅನ್ನು ಸಾಗಿಸುತ್ತದೆ.
ಬಿಳಿ ರಕ್ತಕಣಗಳು ದೇಹವನ್ನು ಪ್ರವೇಶಿಸುವ ಕೀಟಾನುಗಳೊಂದಿಗೆ ಹೋರಾಡುತ್ತದೆ. ಕಿರುತಟ್ಟೆಗಳು ರಕ್ತಸ್ರಾವವಾಗುವ ಸಮಯದಲ್ಲಿ ಅದನ್ನು ಹೆಪ್ಪುಗಟ್ಟಿಸುತ್ತದೆ.
ಪ್ಲಾಸ್ಮ ದ್ರವವು ವಿವಿಧ ವಸ್ತುಗಳನ್ನು ಸಾಗಿಸುತ್ತದೆ.
ರಕ್ತ ಹರಿಯುವ ಕೊಳವೆಗಳನ್ನು ರಕ್ತನಾಳಗಳು ಎನ್ನುತ್ತೇವೆ.
ರಕ್ತನಾಳಗಳನ್ನು ಅಭಿಧಮನಿ ಮತ್ತು ಅಪಧಮನಿಗಳೆಂದು ಗುರುತಿಸುತ್ತೇವೆ. ಅಭಿಧಮನಿಗಳು ದೇಹದ ಭಾಗಗಳಿಂದ ಕಾರ್ಬನ್ ಡೈ ಆಕ್ಸೈಡ್ ಯುಕ್ತ ರಕ್ತವನ್ನು ಹೃದಯಕ್ಕೆ ಸಾಗಿಸುತ್ತದೆ.
ಅಪಧಮನಿಗಳು ಹೃದಯದಿಂದ ಆಕ್ಸಿಜನ್ ಯುಕ್ತ ರಕ್ತವನ್ನು ದೇಹದ ಭಾಗಗಳಿಗೆ ಸಾಗಿಸುತ್ತದೆ.
ಹೃದಯವು ರಕ್ತನಾಳಗಳಲ್ಲಿ ರಕ್ತವನ್ನು ದೂಡುವ ನಿರಂತರ ಪಂಪ್ ನಂತೆ ಕೆಲಸ ಮಾಡುತ್ತದೆ.

ಸೋಮವಾರ, ಜನವರಿ 24, 2022

ದರ್ಪಣಗಳು ( ಪರಿಕಲ್ಪನಾ ನಕ್ಷೆ; ಮೈಂಡ್ ಮ್ಯಾಪ್ ) )

 
<img src="types of mirrors.png" alt="types of mirrors and their uses">

  ಬೆಳಕನ್ನು ಪ್ರತಿಫಲಿಸುವ ನುಣುಪಾದ ಮೇಲ್ಮೈಯನ್ನು ದರ್ಪಣ ಎನ್ನುತ್ತೇವೆ.
ದರ್ಪಣಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ.ಅವುಗಳೆಂದರೆ ಸಮತಲ ದರ್ಪಣ ಮತ್ತು ಗೋಲಿಯ ದರ್ಪಣ.

ಸಮತಲ ದರ್ಪಣ ದಲ್ಲಿ ಪ್ರತಿಬಿಂಬ ದ ಸ್ವಭಾವಗಳು;
ಪ್ರತಿಬಿಂಬವು ಮಿಥ್ಯವಾಗಿರುತ್ತದೆ;ಅಂದರೆ ಪ್ರತಿಬಿಂಬವನ್ನು ಪರದೆಯಲ್ಲಿ ಪಡೆಯಲು ಸಾಧ್ಯವಿಲ್ಲ.
ಪ್ರತಿಬಿಂಬವು ವಸ್ತುವಿನ ಗಾತ್ರದಷ್ಟೇ ಇರುತ್ತದೆ.
ದರ್ಪಣದಿಂದ ವಸ್ತು ಎಷ್ಟು ದೂರದಲ್ಲಿ ಇದಿಯೋ ಅಷ್ಟೇ ದೂರ ಹಿಂದಕ್ಕೆ ಇರುವಂತೆ ಗೋಚರಿಸುತ್ತದೆ.
ಪ್ರತಿಬಿಂಬವು  ಪಾರ್ಶ್ವ ವಿಪರ್ಯಾಯಕ್ಕೆ ಒಳಗಾಗಿರುತ್ತದೆ;ಅಂದರೆ ಪ್ರತಿಬಿಂಬದ ಎಡಬದಿ ಮತ್ತು ಬಲಬದಿ ಅದಲು ಬದಲಾದಂತೆ ಗೋಚರಿಸುತ್ತದೆ.

 ಸಮತಲ ದರ್ಪಣದ ಉಪಯೋಗಗಳು :
ಸಮತಲ ದರ್ಪಣ ವನ್ನು ಅಲಂಕಾರ ದರ್ಪಣಗಳು ಆಗಿ ಬಳಸುತ್ತಾರೆ.
ಸಮತಲ ದರ್ಪಣ ವನ್ನು ಕ್ಷೌರದ ಅಂಗಡಿಗಳಲ್ಲಿ ಬಳಸುತ್ತಾರೆ.
ಸಮತಲ ದರ್ಪಣ ವನ್ನು ಸೂಕ್ಷ್ಮದರ್ಶಕದಲ್ಲಿ ಬಳಸುತ್ತಾರೆ.
ಸೌರ  ಒಲೆಗಳಲ್ಲಿ ಬಳಸುತ್ತಾರೆ.
ಬಹುರೂಪ ದರ್ಶಕ ದಲ್ಲಿ ಬಳಸುತ್ತಾರೆ.
ಪೆರಿಸ್ಕೋಪ್ ಗಳಲ್ಲಿ ಬಳಸುತ್ತಾರೆ.

 ಗೋಳಿಯ ದರ್ಪಣದ ವಿಧಗಳು;
ಗೂಳಿಯ ದರ್ಪಣವನ್ನು ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ;ಅವುಗಳೆಂದರೆ ನಿಮ್ನ ದರ್ಪಣ ಮತ್ತು ಪೀನ ದರ್ಪಣ.
ತಗ್ಗಾದ ಮೇಲ್ಮೈಯನ್ನು ಪ್ರತಿಫಲಿಸುವ ಮೇಲ್ಮೈಯನ್ನಾಗಿ ಹೊಂದಿದ ಗೋಲಿಯ ದರ್ಪಣವೇ ನಿಮ್ನ ದರ್ಪಣ.
ಉಬ್ಬಿದ ಮೇಲ್ಮೈಯನ್ನು ಪ್ರತಿಫಲಿಸುವ ಮೇಲ್ಮೆಯನ್ನಾಗಿ ಹೊಂದಿದ ದರ್ಪಣ ವೇ ಪೀನ ದರ್ಪಣ.

ನಿಮ್ನ ದರ್ಪಣದ ಉಪಯೋಗಗಳು;
ನಿಮ್ನ ದರ್ಪಣ ವನ್ನು  ಕ್ಷೌರದ ಅಂಗಡಿಗಳಲ್ಲಿ ಬಳಸುತ್ತಾರೆ.
ಬೆಳಕಿನ ಉಪಕರಣಗಳಲ್ಲಿ ಬಳಸುತ್ತಾರೆ, ಉದಾಹರಣೆ ಟಾರ್ಚ್.
ನಿಮ್ನ ದರ್ಪಣ ವನ್ನು ರೋಗಿಯನ್ನು ಪರಿಶೀಲಿಸುವ ಸಲಕರಣೆಗಳಲ್ಲಿ ಬಳಸುತ್ತಾರೆ.
ಸೌರ ಒಲೆಗಳಲ್ಲಿ ಬಳಸುತ್ತಾರೆ.
ನಿಮ್ನ ದರ್ಪಣ ವನ್ನು ದೂರದರ್ಶಕ ಗಳಲ್ಲಿ ಬಳಸುತ್ತಾರೆ.

ಪೀನ ದರ್ಪಣದ ಉಪಯೋಗಗಳು :
ಪೀನ ದರ್ಪಣವನ್ನು ವಾಹನಗಳಲ್ಲಿ ಹಿನ್ನೋಟ ದರ್ಪಣಗಳಾಗಿ  ಬಳಸುತ್ತಾರೆ.
ಪೀನ ದರ್ಪಣವನ್ನು ಬೀದಿ ದೀಪಗಳಲ್ಲಿ ಬಳಸುತ್ತಾರೆ.

ಭಾನುವಾರ, ಜನವರಿ 23, 2022

ಕಾರ್ಬನ್ ಪರಿಕಲ್ಪನಾ ನಕ್ಷೆ ( ಮೈಂಡ್ ಮ್ಯಾಪ್ )

       ಅಲೋಹಗಳಲ್ಲಿ ಒಂದು ಧಾತು ಕಾರ್ಬನ್ ಆಗಿದೆ.
ಕಾರ್ಬನ್ನಿನ ಸಂಕೇತ C ಆಗಿದೆ.
ಕಾರ್ಬನ್ನಿನ ಪರಮಾಣು ಸಂಖ್ಯೆ 6, ಪರಮಾಣು ರಾಶಿ ಸಂಖ್ಯೆ 12.
ಕಾರ್ಬನ್ನಿನ ಎಲೆಕ್ಟ್ರಾನ್ ವಿನ್ಯಾಸ 1s²2s²2p²
ಕಾರ್ಬನ್ನಿನ ವ್ಯಾಲೆನ್ಸಿ 4 ಆಗಿದೆ;ಹಾರ್ಮೋನಿನ ಅತ್ಯಂತ ಹೊರಕವಚದಲ್ಲಿ 4 ಎಲೆಕ್ಟ್ರಾನ್ ಗಳನ್ನು ಹೊಂದಿದೆ.ತನ್ನ ಅತ್ಯಂತ ಹತ್ತಿರದ ನೋಬಲ್ ಗ್ಯಾಸ್ ವಿನ್ಯಾಸವನ್ನು ಹೊಂದಲು ಕಾರ್ಬನ್ ಹೈಡ್ರೊಜನ್ ನೊಂದಿಗೆ 4 ಬಂಧಗಳನ್ನು ಮಾಡಿಕೊಳ್ಳುತ್ತದೆ.
ಕಾರ್ಬನ್ನಿನ ಪ್ರಾಮುಖ್ಯತೆ;
ಅತಿ ಹೆಚ್ಚು ಸಂಯುಕ್ತಗಳನ್ನು ಮಾಡಿರುವ ಧಾತುಗಳಲ್ಲಿ ಕಾರ್ಬನ್ ಗೆ ಎರಡನೇ ಸ್ಥಾನವಿದೆ.
ಆಹಾರದ ಪೋಷಕಾಂಶಗಳು ಕಾರ್ಬನ್ ಸಂಯುಕ್ತಗಳಿಂದ ಆಗಿದೆ;ಕಾರ್ಬೊಹೈಡ್ರೇಟ್' ಕೊಬ್ಬು ,ಪ್ರೊಟೀನ್ ಗಳು ಕಾರ್ಬನ್ ಸಂಯುಕ್ತಗಳಿಂದ ಆಗಿದೆ.
ಕಾರ್ಬನಿನ ಸಂಯುಕ್ತಗಳನ್ನು ಉರುವಲುಗಳಾಗಿ ಬಳಸುತ್ತೇವೆ.
ನೂಳುಗಳಾದ ಹತ್ತಿ ರೇಷ್ಮೆ ವುಲ್ಲನ್ ಮೊದಲಾದವುಗಳು ಕಾರ್ಬನಿನ ಸಂಯುಕ್ತಗಳು ಆಗಿದೆ.
ಜೀವಕೋಶದ ಪ್ರೋಟಾಪ್ಲಸಂ ಕಾರ್ಬನ್ ಸಂಯುಕ್ತಗಳಿಂದ ಆಗಿದೆ.
ಕಾರ್ಬನ್ನಿನ ದೊರೆಯುವಿಕೆ :
ಕಾರ್ಬನ್ ದಾತು ಮುಕ್ತ ರೂಪ ಹಾಗೂ ಸಂಯುಕ್ತ ರೂಪದಲ್ಲಿ ದೊರಕುತ್ತದೆ.ಕಾರ್ಬನ್ ದಾತು ವಜ್ರ, ಗ್ರಾಫೈಟ್ ,ಕಲ್ಲಿದ್ದಲು, ಮರದ ಇದ್ದಿಲು, ಕಾಡಿಗೆ ಗಳಾಗಿ ಮುಕ್ತ ರೂಪದಲ್ಲಿ ದೊರೆಯುತ್ತದೆ.
ಕಾರ್ಬನ್  ಧಾತುವು ಈ ಕೆಳಕಂಡ ಸಂಯುಕ್ತಗಳಾಗಿ ಪ್ರಕೃತಿಯಲ್ಲಿ ದೊರಕುತ್ತದೆ;ಕಾರ್ಬನ್ ಡೈಯಾಕ್ಸೈಡ್,ನೈಸರ್ಗಿಕ ಅನಿಲ,ಪೆಟ್ರೋಲಿಯಂ ಅನಿಲ, ಸೆಲ್ಯುಲೋಸ್, ಕಾರ್ಬೊನೇಟ್ ಗಳು (ಸುಣ್ಣದಕಲ್ಲು, ಅಮೃತಶಿಲೆ ,ಕಪ್ಪೆಚಿಪ್ಪು ಇತ್ಯಾದಿ).
ಕಾರ್ಬನ್ ನ ಬಹುರೂಪತೆ;
 ಒಂದೇ ರಾಸಾಯನಿಕ ವಸ್ತು ಬೇರೆಬೇರೆ ಭೌತಿಕ ಲಕ್ಷಣಗಳುಳ್ಳ ವಸ್ತುಗಳಾಗಿ ದೊರೆಯುವುದಕ್ಕೆ ಆ ರಾಸಾಯನಿಕ ವಸ್ತುವಿನ ಬಹುರೂಪತೆ ಎನ್ನುವರು.
ವಜ್ರ, ಗ್ರಾಫೈಟ್, ಫುಲ್ಲರಿನ್, ಕಲ್ಲಿದ್ದಲು, ಕೋಕ್, ಕಾಡಿಗೆ, ಇದ್ದಿಲು (ಮರದ ಇದ್ದಿಲು, ಮೂಳೆಯ ಇದ್ದಿಲು, ಸಕ್ಕರೆಯ ಇದ್ದಿಲು).

ಶನಿವಾರ, ಜನವರಿ 22, 2022

ಲೋಹಗಳು ಮತ್ತು ಅಲೋಹಗಳು

  ಪ್ರಕೃತಿಯಲ್ಲಿ ದೊರಕುವ ಎಲ್ಲಾ ವಸ್ತುಗಳು ಸುಮಾರು 94 ಧಾತುಗಳು ಮತ್ತು ಅವುಗಳ ಸಂಯುಕ್ತಗಳಿಂದ ಆಗಿದೆ.
ಏಕರೀತಿಯ ಪರಮಾಣುಗಳನ್ನು ಹೊಂದಿರುವ ವಸ್ತುಗಳನ್ನು ಧಾತುಗಳು ಎನ್ನುತ್ತೇವೆ.ವಸ್ತುವಿನ ಅತ್ಯಂತ ಸೂಕ್ಷ್ಮ ಘಟಕವನ್ನು ಪರಮಾಣು ಎನ್ನುತ್ತೇವೆ.
ದಾತುಗಳನ್ನು ಅವುಗಳು ತೋರಿಸುವ ಲಕ್ಷಣಗಳ ಆಧಾರದ ಮೇಲೆ ಎರಡು ವಿಧಗಳಾಗಿ ವರ್ಗೀಕರಿಸಬಹುದು;ಅವುಗಳೆಂದರೆ ಲೋಹಗಳು ಮತ್ತು ಅಲೋಹಗಳು.

ಲೋಹಗಳ ಭೌತಿಕ ಲಕ್ಷಣಗಳು;
1)ಲೋಹಗಳು ಸಾಮಾನ್ಯವಾಗಿ ಘನ ಸ್ಥಿತಿಯಲ್ಲಿರುತ್ತವೆ.
2)ಲೋಹಗಳು ಹೊಳೆಯುತ್ತವೆ.
3)ಲೋಹಗಳು ಉಷ್ಣ ಮತ್ತು ವಿದ್ಯುತ್ ನ ಉತ್ತಮ ವಾಹಕಗಳಾಗಿವೆ.
4)ಲೋಹಗಳು ತನ್ಯ ಮತ್ತು ಲೋಹಗಳು ತನ್ಯ ಮತ್ತು ಕುಟ್ಯ ಆಗಿವೆ; ತನ್ಯ ಎಂದರೆ ಲೋಹಗಳನ್ನು ತಂತಿ ಗಳನ್ನಾಗಿ ಎಳೆಯಬಹುದು, ಕುಟ್ಯ ಎಂದರೆ ಲೋಹಗಳನ್ನು ಕುಟ್ಟಿ ಹಾಳೆಗಳನ್ನಾಗಿ ಮಾಡಬಹುದು.
5)ಲೋಹಗಳು ಕಠಿಣವಾಗಿದ್ದು ಉನ್ನತ ದ್ರವನ ಬಿಂದುವನ್ನು ಹೊಂದಿರುತ್ತವೆ.

ಲೋಹಗಳ ರಾಸಾಯನಿಕ ಲಕ್ಷಣಗಳು;
1)ಲೋಹಗಳು ಎಲೆಕ್ಟ್ರಾನುಗಳನ್ನು ಬಿಟ್ಟುಕೊಡುತ್ತವೆ.
2)ಲೋಹಗಳು ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿ ಹೈಡ್ರೋಜನ್ ಅನ್ನು ಬಿಡುಗಡೆ ಮಾಡುತ್ತವೆ.
3)ಲೋಹಗಳು ಆಕ್ಸಿಜನ್ ನೊಂದಿಗೆ ಪ್ರತಿಕ್ರಿಯಿಸಿ ಪ್ರತ್ಯಾಮ್ಲೀಯ ಆಕ್ಸೈಡ್ ಗಳನ್ನು ಉತ್ಪತ್ತಿಮಾಡುತ್ತವೆ.
4)ಲೋಹಗಳು   ಹೈಡ್ರೋಜನ್ ನೊಂದಿಗೆ ಪ್ರತಿಕ್ರಿಯಿಸಿ ಹೈಡ್ರೈಡ್ ಗಳನ್ನು ಉತ್ಪತ್ತಿಮಾಡುತ್ತವೆ.

ಅಲೋಹಗಳ ಭೌತಿಕ ಲಕ್ಷಣಗಳು;
1)ಅಲೋಹಗಳು ಘನ, ದ್ರವ, ಅನಿಲ ಸ್ಥಿತಿಗಳಲ್ಲಿ ದೊರೆಯುತ್ತವೆ.
2)ಅಲೋಹಗಳು ಹೊಳೆಯುವುದಿಲ್ಲ.
3)ಅಲೋಹಗಳು ಉಷ್ಣ ಮತ್ತು ವಿದ್ಯುತ್ ಅವಾಹಕ ಗಳಾಗಿವೆ.
4)ಅಲೋಹಗಳು ತನ್ಯವೂ ಅಲ್ಲ ಕುಟ್ಯವೂ ಅಲ್ಲ.
5)ಅಲೋಹಗಳು ಸಾಮಾನ್ಯವಾಗಿ ಮೃದುವಾಗಿರುತ್ತವೆ ಮತ್ತು ಕಡಿಮೆ ದ್ರವನಬಿಂದು ಹೊಂದಿರುತ್ತವೆ.

ಅಲೋಹಗಳ ರಾಸಾಯನಿಕ ಲಕ್ಷಣಗಳು;
1)ಅಲೋಹಗಳು ಎಲೆಕ್ಟ್ರಾನುಗಳನ್ನು ಸ್ವೀಕಾರ ಮಾಡುತ್ತವೆ.
2)ಅಲೋಹಗಳು ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿ ಹೈಡ್ರೋಜನ್ ಅನ್ನು ಬಿಡುಗಡೆ ಮಾಡುವುದಿಲ್ಲ.
3)ಅಲೋಹಗಳು ಆಕ್ಸಿಜನ್ ನೊಂದಿಗೆ ಪ್ರತಿಕ್ರಿಯಿಸಿ ಆಮ್ಲೀಯ ಆಕ್ಸೈಡ್ ಗಳನ್ನು ಉತ್ಪತ್ತಿಮಾಡುತ್ತವೆ.
4)ಅಲೋಹಗಳು  ಹೈಡ್ರೋಜನ್ ನೊಂದಿಗೆ ಪ್ರತಿಕ್ರಿಯಿಸಿ ಸಹವೇಲೆನ್ಸೀಯ  ಸಂಯುಕ್ತಗಳನ್ನು ಕೊಡುತ್ತವೆ.

ಶುಕ್ರವಾರ, ಜನವರಿ 21, 2022

ಉಸಿರಾಟದ ಪರಿಕಲ್ಪನೆಯ ಮೈಂಡ್ ಮ್ಯಾಪ್.

ಉಸಿರಾಟ ಎಂದರೇನು ?
ಉಸಿರಾಟ ಎಂಬುದು ಒಂದು ಪ್ರಕ್ರಿಯೆ.ಉಸಿರಾಟವು ಜೀವಿಯ ಜೀವಕೋಶಗಳಲ್ಲಿ ನಡೆಯುತ್ತದೆ.ಜೀವಕೋಶಕ್ಕೆ ಬೇಕಾದಂತಹ ಶಕ್ತಿಯನ್ನು ಉತ್ಪಾದಿಸಲು ಜೀವಕೋಶದಲ್ಲಿ ಉಸಿರಾಟ ನಡೆಯುತ್ತದೆ.ಜೀವ ಕ್ರಿಯೆಗಳನ್ನು ನಡೆಸಲು ಜೀವಕೋಶಕ್ಕೆ ಶಕ್ತಿ ಬೇಕಾಗಿದೆ.ಪೋಷಣೆ, ಸಾಗಾಣಿಕೆ, ವಿಸರ್ಜನೆ, ವಂಶಾಭಿವೃದ್ಧಿ ಗಳಂತಹ ಜೀವ ಕ್ರಿಯೆಗಳನ್ನು ಜೀವಕೋಶವು ನಡೆಸುತ್ತಿದೆ.

ಉಸಿರಾಟವೆಂದರೆ ಆಹಾರದ ಅಂದರೆ ಗುಲ್ಕೋಸ್ ನ ವಿಭಜನೆಯಾಗಿದೆ.ಆಕ್ಸಿಜನ್ ನ ಬಳಕೆಯಿಂದ ಆಹಾರ ವಿಭಜನೆಯಾಗುತ್ತದೆ.ಆಹಾರವು ಕಾರ್ಬನ್ ಡೈಯಾಕ್ಸೈಡ್, ನೀರು ಮತ್ತು ಶಕ್ತಿ ಗಳಾಗಿ ವಿಭಜನೆಯಾಗುತ್ತದೆ.

ಉಸಿರಾಟವನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು, ಅವುಗಳೆಂದರೆ ಆಕ್ಸಿಜನ್ ಸಹಿತ ಉಸಿರಾಟ ಮತ್ತು ಆಕ್ಸಿಜನ್ ರಹಿತ ಉಸಿರಾಟ.
ಆಕ್ಸಿಜನ್ ಸಹಿತ ಉಸಿರಾಟದಲ್ಲಿ ಆಕ್ಸಿಜನ್ ನ ಬಳಕೆಯಿಂದ ಆಹಾರವು ವಿಭಜನೆಯಾಗುತ್ತದೆ.
ಇಲ್ಲಿ ಕಾರ್ಬನ್ ಡೈಯಾಕ್ಸೈಡ್, ನೀರು ಮತ್ತು ಶಕ್ತಿ ಬಿಡುಗಡೆಯಾಗುತ್ತದೆ.
ಆಕ್ಸಿಜನ್ ರಹಿತ ಉಸಿರಾಟದಲ್ಲಿ ಆಕ್ಸಿಜನ್ ನ ಬಳಕೆಯಿಲ್ಲದೆ ಆಹಾರವು ವಿಭಜಿಸಲ್ಪಡುತ್ತದೆ.ಇಲ್ಲಿ ಕಾರ್ಬನ್ ಡೈಯಾಕ್ಸೈಡ್, ಆಲ್ಕೋಹಾಲ್ ಮತ್ತು ಶಕ್ತಿ ಬಿಡುಗಡೆಯಾಗುತ್ತದೆ.
 ಆಕ್ಸಿಜನ ರಹಿತ ಉಸಿರಾಟವು ಯೀಷ್ಟ್ ಕೋಶಗಳಲ್ಲಿ ನಡೆಯುತ್ತದೆ ಆದ್ದರಿಂದ ಯೀಷ್ಟನ್ನು ಮದ್ಯದ ಉತ್ಪಾದನೆಯಲ್ಲಿ ಉಪಯೋಗಿಸಲಾಗುತ್ತದೆ.
ಅಲ್ಲದೆ ಆಕ್ಸಿಜನ್ ರಹಿತ ಉಸಿರಾಟವು ಮಾನವನ ಸ್ನಾಯು ಕೋಶಗಳಲ್ಲೂ ನಡೆಯುತ್ತದೆ.ಮಾನವನ ಸ್ಥಾಯಿ ಕೋಶಗಳಲ್ಲಿ ಲ್ಯಾಕ್ಟಿಕ್ ಆಮ್ಲ ಮತ್ತು ಶಕ್ತಿಯಾಗಿ ಆಹಾರವು ವಿಭಜನೆಯಾಗುತ್ತದೆ.
ಶ್ವಾಸಕ್ರಿಯೆ :
ಸ್ವಾಸ ಕ್ರಿಯೆಯು ಉಸಿರಾಟದ ಒಂದು ಪೂರಕ ಕ್ರಿಯೆಯಾಗಿದ್ದು ಎರಡು ಹಂತಗಳನ್ನು ಒಳಗೊಂಡಿದೆ.ಅವುಗಳೆಂದರೆ ಉಚ್ವಾಸ ಮತ್ತು   ನಿಶ್ವಾಸ.
ಉಚ್ವಾಸ ಎಂದರೆ ಮೂಗಿನ ಮೂಲಕ ಗಾಳಿಯನ್ನು ಒಳಗೆಳೆದುಕೊಳ್ಳುವುದು.
ನಿಶ್ವಾಸ ವೆಂದರೆ ಶ್ವಾಸಕೋಶದಿಂದ ಮೂಗಿನ ಮುಖಾಂತರ ಗಾಳಿಯನ್ನು ಹೊರಹಾಕುವಿಕೆ.

8ನೇ ತರಗತಿ ವಿಜ್ಞಾನ|| ಕಲಿಕಾ ಚೇತರಿಕೆ || ಲೋಹಗಳು ಮತ್ತು ಅಲೋಹಗಳು || ಕಲಿಕಾ ಫಲಗಳು 3

ಕಲಿಕಾ ಫಲ 3   ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವರು ಹಾಗೂ ಆಮ್ಲ ಪ್ರತ್ಯಾಮ್ಲಗಳಲ್ಲಿರುವ ಲೋಹ ಮತ್ತು ಅಲೋಹಗಳನ್ನು ಗುರುತಿಸುವರು.   ಕಲಿಕಾ ...