ಸೋಮವಾರ, ಫೆಬ್ರವರಿ 7, 2022

ನೀರಿನ ಭೌತಿಕ ಮತ್ತು ರಾಸಾಯನಿಕ ಗುಣಗಳು

ನೀರು ಹೈಡ್ರೋಜನ್ ಮತ್ತು ಆಕ್ಸಿಜನ್ ಗಳಿಂದಾದ ಒಂದು ಸಂಯುಕ್ತ ವಸ್ತುವಾಗಿದೆ.
ಶುದ್ಧ ನೀರಿನ  ಭೌತಿಕ ಲಕ್ಷಣಗಳು;
ಶುದ್ಧ ನೀರು ಬಣ್ಣವಿಲ್ಲದ ಪಾರದರ್ಶಕ ದ್ರವವಾಗಿದೆ.
ಶುದ್ಧ ನೀರಿಗೆ ವಾಸನೆಯಿಲ್ಲ, ರುಚಿಯಿಲ್ಲ.
ಶುದ್ಧ ನೀರು 100 ಡಿಗ್ರಿ ಸೆಲ್ಸಿಯಸ್ ನಲ್ಲಿ ಕುದಿಯುತ್ತದೆ ಮತ್ತು 0 ಡಿಗ್ರಿ ಸೆಲ್ಸಿಯಸ್ ನಲ್ಲಿ ಘನೀಭವಿಸುತ್ತದೆ.
ನೀರು ಒಂದು ಉಷ್ಣ ಅವಾಹಕ ವಸ್ತುವಾಗಿದೆ ಆದರೆ ನೀರು ಒಂದು ಅನುಷ್ಣವಾಹಕ ವಸ್ತು.ನೀರು ವಿದ್ಯುತ್ ನ ಅವಾಹಕ.ನೀರಿನಲ್ಲಿ ಮಿಶ್ರವಾಗಿರುವ ಲವಣಗಳಿಂದಾಗಿ ನೀರಿನಲ್ಲಿ ವಿದ್ಯುತ್ ಹರಿಯುತ್ತದೆ.
ನೀರು ಅಸಂಬದ್ಧ ವಿಕಾಸವನ್ನು ತೋರಿಸುತ್ತದೆ; ಅಂದರೆ ನೀರಿನ ತಾಪವನ್ನು 4 ಡಿಗ್ರಿ ಸೆಲ್ಸಿಯಸ್ ನಿಂದ 0 ಡಿಗ್ರಿ ಸೆಲ್ಸಿಯಸ್ ನವರಿಗೆ ಇಳಿಸುವಾಗ ನೀರು ಕುಗ್ಗುವ ಬದಲು ಹಿಗ್ಗುತ್ತದೆ.
ಮಂಜುಗಡ್ಡೆ ನೀರಿನಲ್ಲಿ ತೇಲುತ್ತದೆ ಏಕೆಂದರೆ ಮಂಜುಗಡ್ಡೆಯ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆ.
ನೀರು ಒಂದು ಉತ್ತಮ ದ್ರಾವಕ ವಾಗಿದೆ. ನೀರನ್ನು ಸಾರ್ವತ್ರಿಕ ದ್ರಾವಕ ಎಂದೂ ಕರೆಯುತ್ತಾರೆ ಏಕೆಂದರೆ ನೀರಿನಲ್ಲಿ ಬಹುಪಾಲು ವಸ್ತುಗಳು ಕರಗುತ್ತವೆ.

ನೀರಿನ ರಾಸಾಯನಿಕ ಲಕ್ಷಣಗಳು;
ನೀರು ಒಂದು ತಟಸ್ಥ ದ್ರವ ಅಂದರೆ ನೀರು ಆಮ್ಲೀಯವೂ ಅಲ್ಲ ಪ್ರತ್ಯಾಮ್ಲೀಯವೂ ಅಲ್ಲ.ನೀರು ರಾಸಾಯನಿಕ ಕ್ರಿಯೆಗಳಿಗೆ ಮಾಧ್ಯಮವಾಗಿ ಮತ್ತು ಕ್ಯಾಟಲಿಸ್ಟ್ (ವೇಗವರ್ಧಕ ) ಆಗಿ ಕೆಲಸ ಮಾಡಬಲ್ಲದು.
ಪದಾರ್ಥಗಳು ನೀರಿನೊಂದಿಗೆ ಪ್ರತಿಕ್ರಿಯಿಸಿದಾಗ ಹೈಡ್ರೇಟ್ ಗಳನ್ನು ಕೊಡುತ್ತವೆ.
ನೀರು ಲೋಹಗಳೊಂದಿಗೆ ಪ್ರತಿಕ್ರಿಯಿಸಿ ಲೋಹದ ಆಕ್ಸೈಡ್ ಅಥವಾ ಲೋಹದ ಹೈಡ್ರಾಕ್ಸೈಡ್ ಗಳನ್ನು ಕೊಡುತ್ತದೆ.
ಉದಾಹರಣೆಗೆ,
2Na+2H2O→2NaOH+H2
Mg + H2O → MgO + H2

ಭಾನುವಾರ, ಫೆಬ್ರವರಿ 6, 2022

ಜೀವಿಗಳಲ್ಲಿ ಪೋಷಣೆ

ಪೋಷಣೆಯು ಜೀವ ಕ್ರಿಯೆಗಳಲ್ಲಿ ಒಂದು.
ಜೀವಿ ಜೀವಂತವಾಗಿರಲು ನಡೆಸುವ ಮೂಲ ಕ್ರಿಯೆಗಳನ್ನು ಜೀವಕ್ರಿಯೆಗಳು ಎನ್ನುತ್ತೇವೆ.

ಜೀವಿ ಸೇವಿಸಿದ ಆಹಾರವನ್ನು ಜೀರ್ಣಿಸಿ ದೇಹಗತ ಮಾಡಿಕೊಳ್ಳುವುದಕ್ಕೆ ಪೋಷಣೆ ಎನ್ನುತ್ತೇವೆ.

ಪೋಷಣೆಯ ಆಧಾರದ ಮೇಲೆ ಜೀವಿಗಳನ್ನು ಎರಡು ಬಗೆಗಳಾಗಿ ವಿಂಗಡನೆ ಮಾಡಬಹುದು, ಅವುಗಳೆಂದರೆ ಸ್ವಪೋಷಕಗಳು ಮತ್ತು ಪರಪೋಷಕಗಳು.
ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಜೀವಿಗಳನ್ನು ಸ್ವಪೋಷಕಗಳು ಎನ್ನುತ್ತೇವೆ. ಉದಾಹರಣೆಗೆ ಎಲ್ಲಾ ಹಸಿರು ಸಸ್ಯಗಳು.
ತಮ್ಮ ಆಹಾರಕ್ಕಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಸಿರು ಸಸ್ಯಗಳನ್ನು ಅವಲಂಬಿಸಿರುವ ಜೀವಿಗಳನ್ನು ಪರಪೋಷಕಗಳು ಎನ್ನುತ್ತೇವೆ.ಉದಾಹರಣೆಗೆ ಪ್ರಾಣಿಗಳು .ಕೆಲವು ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಪ್ರತ್ಯಕ್ಷವಾಗಿ ಅಂದರೆ ನೇರವಾಗಿ ಹಸಿರು ಸಸ್ಯಗಳನ್ನು ಅವಲಂಬಿಸಿರುತ್ತವೆ.ಅಂತಹ ಪ್ರಾಣಿಗಳನ್ನು ಸಸ್ಯಹಾರಿಗಳು ಎನ್ನುತ್ತೇವೆ.ಆದರೆ ಮತ್ತೆ ಕೆಲವು ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಸಸ್ಯಹಾರಿ ಪ್ರಾಣಿಗಳನ್ನು ಅವಲಂಬಿಸಿರುತ್ತವೆ ಅಂದರೆ ಪರೋಕ್ಷವಾಗಿ ಸಸ್ಯಗಳನ್ನು ಅವಲಂಬಿಸಿರುತ್ತವೆ.ಈ ಜೀವಿಗಳನ್ನು ಮಾಂಸಹಾರಿಗಳು ಎನ್ನುತ್ತೇವೆ.
ಅಲ್ಲದೆ ಪತ್ರಹರಿತು ಇಲ್ಲದ ಕಸ್ಕ್ಯೂಟ ನಾಯಿಕೊಡೆ ಮುಂತಾದ ಸಸ್ಯಗಳು ಕೂಡ ತಮ್ಮ ಆಹಾರಕ್ಕಾಗಿ ಇತರ ಜೀವಿಗಳನ್ನು ಅವಲಂಬಿರುತ್ತವೆ. ಆದ್ದರಿಂದ ಇವುಗಳನ್ನು ಕೂಡ ಪರಪೋಷಕಗಳು ಎನ್ನುತ್ತೇವೆ.

ಶನಿವಾರ, ಫೆಬ್ರವರಿ 5, 2022

ಸಸ್ಯಗಳಲ್ಲಿ ಲೈಂಗಿಕ ಸಂತಾನೋತ್ಪತ್ತಿ ( sexual reproduction).

   ಜೀವಿಗಳು  ಮರಿ ಜೀವಿಯನ್ನು ಹುಟ್ಟಿಸುವುದಕ್ಕೆ ಸಂತಾನೋತ್ಪತ್ತಿ (reproduction) ಎನ್ನುತ್ತೇವೆ
  ಸಂತಾನೋತ್ಪತ್ತಿ ಯಲ್ಲಿ ಎರಡು ವಿಧಗಳಿವೆ ;
ಲೈಂಗಿಕ ಸಂತಾನೋತ್ಪತ್ತಿ (sexual reproduction) ಮತ್ತು ನಿರ್ಲಿಂಗ ರೀತಿಯ ಸಂತಾನೋತ್ಪತ್ತಿ ( asexual reproduction).
ಲಿಂಗ ರೀತಿಯ ಸಂತಾನೋತ್ಪತ್ತಿ ಎಂದರೇನು ?
ಲಿಂಗಾಣುಗಳೆಂಬ ಏಕಕೋಶಿಯ ರಚನೆಗಳ ಸಂಯೋಗದಿಂದ ಹೊಸ ಜೀವಿ ಹುಟ್ಟುವುದಕ್ಕೆ ಲಿಂಗ ರೀತಿಯ ಸಂತಾನೋತ್ಪತ್ತಿ ಎನ್ನುತ್ತೇವೆ.
ಸಸ್ಯಗಳಲ್ಲಿ ಲಿಂಗ ರೀತಿಯ ಸಂತಾನೋತ್ಪತ್ತಿ ;
ಹೂವು ಸಸ್ಯದ ಸಂತಾನೋತ್ಪತ್ತಿಯ ಭಾಗವಾಗಿದೆ.ಪುಷ್ಪಪತ್ರ, ಪುಷ್ಪದಳಗಳು,ಕೇಸರಗಳು, ಶಲಾಕೆ ಹೂವಿನ ಭಾಗಗಳಾಗಿವೆ. ಕೇಸರಗಳಲ್ಲಿ ಪರಾಗರೇಣುಗಳಿದ್ದು ಗಂಡು ಲಿಂಗಾಣುಗಳನ್ನು ಒಳಗೊಂಡಿರುತ್ತದೆ.
ಶಲಾಕೆಯಲ್ಲಿ ಅಂಡಕೋಶವಿದ್ದು ಹೆಣ್ಣು ಲಿಂಗಾಣುವನ್ನು ಹೊಂದಿರುತ್ತದೆ.
   ಹೂವಿನಲ್ಲಿ ಎರಡು ವಿಧಗಳಿವೆ;ಏಕಲಿಂಗ ಪುಷ್ಪ ಮತ್ತು ದ್ವಿಲಿಂಗ ಪುಷ್ಪ.
ಏಕಲಿಂಗ ಪುಷ್ಪವು ಕೇಸರ ಅಥವಾ ಸಲಾಕೆಯನ್ನು ಹೊಂದಿರುತ್ತದೆ.ಕುಂಬಳದ ಹೂವು ಏಕಲಿಂಗ ಪುಷ್ಪಕ್ಕೆ ಉದಾಹರಣೆಯಾಗಿದೆ.
ದ್ವಿಲಿಂಗ ಪುಷ್ಪವು ಕೇಸರ ಮತ್ತು ಶಲಾಕೆ ಎರಡನ್ನೂ ಹೊಂದಿರುತ್ತದೆ. ಉದಾಹರಣೆಗೆ ದಾಸವಾಳ.
  ಪರಾಗಸ್ಪರ್ಶ (Pollination);ಒಂದು ಹೂವಿನಲ್ಲಿರುವ ಪರಾಗರೇಣುಗಳು ಅದೇ ಜಾತಿಯ ಹೂವಿನ ಶಾಲಾಕೆಯನ್ನು ತಲುಪುವುದಕ್ಕೆ ಪರಾಗಸ್ಪರ್ಶ ಎನ್ನುತ್ತೇವೆ.
ಪರಾಗಸ್ಪರ್ಶವು ಒಂದೇ ಹೂವಿನಲ್ಲಿ ನಡೆಯಬಹುದು ಅಥವಾ ಒಂದೇ ಜಾತಿಯ ಎರಡು ಹೂಗಳಲ್ಲಿ ನಡೆಯಬಹುದು.
ಒಂದು ಹೂವಿನಲ್ಲಿರುವ ಪರಾಗರೇಣುಗಳು ಅದೇ ಹೂವಿನ ಶಲಾಕಾಗ್ರವನ್ನು ತಲುಪುವುದಕ್ಕೆ ಸ್ವಕೀಯ ಪರಾಗಸ್ಪರ್ಶ ಎನ್ನುತ್ತೇವೆ.
ಒಂದು ಹೂವಿನಲ್ಲಿರುವ ಪರಾಗರೇಣುಗಳು ಅದೇ ಜಾತಿಯ ಬೇರೊಂದು ಹೂವಿನ ಶಲಾಕಾಗ್ರವನ್ನು ತಲುಪುವುದಕ್ಕೆ ಪರಕೀಯ ಪರಾಗಸ್ಪರ್ಶ ಎನ್ನುತ್ತೇವೆ.
ಪರಾಗಸ್ಪರ್ಶದ ಮೂಲಕ ಹೂವಿನಲ್ಲಿ ಗರ್ಭಧಾರಣೆಯಾಗುತ್ತದೆ.ಗರ್ಭಧಾರಣೆಯಾಗಿ ಅಂಡಾಶಯದಲ್ಲಿ ಬೀಜೋತ್ಪತ್ತಿ ಆಗುತ್ತದೆ.
ಈ ಬೀಜದಿಂದ ಹೊಸ ಸಸ್ಯ ಉತ್ಪತ್ತಿಯಾಗುತ್ತದೆ.

ವಿಸರ್ಜನೆ

ಜೀವಿಗಳು ಜೀವಂತವಾಗಿರಲು ಉಸಿರಾಟ ಜೀರ್ಣಕ್ರಿಯೆ ಗಳಂತಹ ಜೀವ ಕ್ರಿಯೆಗಳನ್ನು ನಡೆಸುತ್ತವೆ.ಅಂತಹ ಒಂದು ಜೀವ ಕ್ರಿಯೆಯೇ ವಿಸರ್ಜನೆ.
ಜೀವಿಗಳು ನಿರುಪಯುಕ್ತ ವಸ್ತುಗಳನ್ನು ತಮ್ಮ ದೇಹದಿಂದ ಹೊರ ಹಾಕುವುದಕ್ಕೆ ವಿಸರ್ಜನೆ ಎನ್ನುತ್ತೇವೆ.ಜೀವಿಗಳು ಹೀಗೆ ಮಾಡದಿದ್ದಲ್ಲಿ ನಿರುಪಯುಕ್ತ ವಸ್ತುಗಳು ದೇಹದಲ್ಲಿ ಉಳಿದು ವಿಷವಾಗುತ್ತದೆ.

ಸಸ್ಯಗಳಲ್ಲಿ ವಿಸರ್ಜನೆ; ಸಸ್ಯಗಳು ಕಾರ್ಬನ್ ಡೈಯಾಕ್ಸೈಡ್ ಸಸಾರಜನಕ ಟೆನಿನ್ ಆಲ್ಕಲಾಯ್ಡ್ ಮುಂತಾದ ನಿರುಪಯುಕ್ತ ವಸ್ತುಗಳನ್ನು ಹೊರಹಾಕುತ್ತವೆ.ಈ ನಿರುಪಯುಕ್ತ ವಸ್ತುಗಳು ಎಲೆ ತೊಗಟೆ ಹೂವಿನ ದಳಗಳಲ್ಲಿ ಶೇಖರವಾಗುತ್ತದೆ.ಎಲೆಗಳು,ತೊಗಟೆ, ಹೂವಿನ ದಳಗಳು ಉದುರಿದಾಗ ವಿಸರ್ಜನೆಯಾಗುತ್ತದೆ.

ಪ್ರಾಣಿಗಳಲ್ಲಿ ವಿಸರ್ಜನೆ;
ಅಮೀಬಾ , ಹೈಡ್ರಾ ಮುಂತಾದ ಸರಳ ಜೀವಿ ಗಳಲ್ಲಿ ವಿವರಣೆಯ ಮೂಲಕ ವಿಸರ್ಜನೆಯಾಗುತ್ತದೆ.ವಿಸರಣೆ ಎಂದರೆ ವಸ್ತುಗಳು ಹೆಚ್ಚು ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಚಲಿಸುವುದು.
  ಈಗ ಕೆಲ ಬಹುಕೋಶಿಯ ಜೀವಿಗಳಲ್ಲಿ ವಿಸರ್ಜನೆ ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸೋಣ.
ಪ್ಲನೇರಿಯಾ ಎಂಬ ಸಿಹಿನೀರಿನಲ್ಲಿ ವಾಸಿಸುವ ಚಪ್ಪಟೆ ಹುಳುವಿನಲ್ಲಿ ಜ್ವಾಲಾ ಕೋಶಗಳು (flame cells) ಪ್ರತ್ಯೇಕ ಕೋಶಗಳಿದ್ದು ಅವು ಕಿಡ್ನಿ ಯಂತೆ ಕಾರ್ಯನಿರ್ವಹಿಸಿ ನಿರುಪಯುಕ್ತ ವಸ್ತುಗಳನ್ನು ಹೊರಹಾಕುತ್ತವೆ.ಇದೇ ರೀತಿ ಎರೆಹುಳು ವಿನಲ್ಲಿ ನೆಫ್ರೀಡಿಯ(nephridia) ಮತ್ತು ಕೀಟಗಳಲ್ಲಿ ಮಾಲ್ಫಿಜಿಯನ್ ನಾಳಗಳು (Malpighian tubules) ಕಶೇರುಕಗಳ ಕಿಡ್ನಿಯಂತೆ ಕೆಲಸ ಮಾಡುವ ವಿಸರ್ಜನಾಂಗ ಗಳಾಗಿವೆ.

ಮಾನವನಲ್ಲಿ ವಿಸರ್ಜನೆ;
ಮಾನವನಲ್ಲಿ ಶ್ವಾಸಕೋಶಗಳು, ಮೂತ್ರಜನಕಾಂಗಗಳು ಮತ್ತು ಚರ್ಮ ವಿಸರ್ಜನಾಂಗಗಳಾಗಿವೆ.
ಶ್ವಾಸಕೋಶವೂ ಕಾರ್ಬನ್ ಡೈಆಕ್ಸೈಡ್, ನೀರು ಗಳನ್ನು ಹೊರಹಾಕುತ್ತದೆ.
ಮೂತ್ರಜನಕಾಂಗವು ಯೂರಿಯಾ,ಯೂರಿಕ್ ಆಮ್ಲ, ಲವಣಗಳು, ನೀರು ಗಳನ್ನು ವಿಸರ್ಜಿಸುತ್ತದೆ.
ಚರ್ಮವು ಯೂರಿಯಾ ಲವಣಗಳು ನೀರು ಗಳನ್ನು ವಿಸರ್ಜಿಸುತ್ತದೆ.
  ಮೂತ್ರಜನಕಾಂಗಗಳು ನೆಫ್ರಾನ್ ಗಳು ಎಂಬ ವಿಶಿಷ್ಟ ಕೋಶಗಳಿಂದ ಮಾಡಲ್ಪಟ್ಟಿದೆ.ನೆಪ್ರಾನ್ ಗಳು ರಕ್ತದಿಂದ ನಿರುಪಯುಕ್ತ ವಸ್ತುಗಳನ್ನು ಬೇರ್ಪಡಿಸುತ್ತವೆ.

ಶುಕ್ರವಾರ, ಫೆಬ್ರವರಿ 4, 2022

ವಿದ್ಯುತ್ ಶಕ್ತಿ

    ವಿದ್ಯುಚ್ಛಕ್ತಿಯು ಒಂದು ಅತ್ಯಂತ ಅನುಕೂಲಕರ ಶಕ್ತಿಯ ರೂಪವಾಗಿದೆ.ಏಕೆಂದರೆ ವಿದ್ಯುಚ್ಛಕ್ತಿಯನ್ನು ಸುಲಭವಾಗಿ ಇತರ ಶಕ್ತಿಯ ರೂಪಗಳಿಗೆ ಪರಿವರ್ತಿಸಿಕೊಳ್ಳಬಹುದು.
ವಿದ್ಯುತ್ ಶಕ್ತಿಯ ಏಕಮಾನ ಗಳಾಗಿ ಜೂಲ್ (J),ಕಿಲೋ ಜೂಲ್ (1000J), ಯೂನಿಟ್ (ಕಿಲೋವ್ಯಾಟ್ - ಗಂಟೆ) ಗಳನ್ನು ಬಳಸುತ್ತೇವೆ.ವಿದ್ಯುಚ್ಛಕ್ತಿಯ ಅಂತರಾಷ್ಟ್ರೀಯ ಏಕಮಾನ ಜೂಲ್ ಆಗಿದೆ.
ವಿದ್ಯುಚಕ್ತಿ ಏಕಮಾನ ಒಂದು ಯೂನಿಟ್ ಎಂದರೇನು ?
  ಒಂದು ಸೆಕೆಂಡಿಗೆ ಸಾವಿರ ಜೂಲ್ (1000J) ನಂತೆ ಸತತ ಒಂದು ಗಂಟೆಗಳ ಕಾಲ ಬಳಸಲ್ಪಡುವ ವಿದ್ಯುಚ್ಛಕ್ತಿಯ ಪ್ರಮಾಣಕ್ಕೆ ಒಂದು ಯೂನಿಟ್ ಎನ್ನುತ್ತೇವೆ.ಯೂನಿಟ್ ಅನ್ನು ಕಿಲೋವ್ಯಾಟ್-ಗಂಟೆ (kWh ) ನಿಂದಲೂ ಸೂಚಿಸುತ್ತೇವೆ.
ವಿದ್ಯುತ್ ಸಾಮರ್ಥ್ಯ ಎಂದರೇನು ?
ವಿದ್ಯುಚ್ಛಕ್ತಿ ಉಪಯೋಗಿಸಲ್ಪಡುವ ದರಕ್ಕೆ ವಿದ್ಯುತ್ ಸಾಮರ್ಥ್ಯ ಎನ್ನುತ್ತೇವೆ.
P =E/t  ಇಲ್ಲಿ P = ವಿದ್ಯುತ್ ಸಾಮರ್ಥ್ಯ.
                     E =ಉಪಯೋಗವಾದ ವಿದ್ಯುಚ್ಛಕ್ತಿ .
                     t=ಉಪಯೋಗಿಸಲು ತೆಗೆದುಕೊಂಡ ಕಾಲ
ವಿದ್ಯುತ್ ಸಾಮರ್ಥ್ಯದ ಏಕಮಾನ ವ್ಯಾಟ್ ಆಗಿದೆ. ಒಂದು ವ್ಯಾಟ್ = 1J/S
ವಿದ್ಯುತ್ ಪ್ರವಾಹದ ಪರಿಣಾಮಗಳು ;
ವಿದ್ಯುತ್ ಪ್ರವಾಹವು ಮೂರು ಮುಖ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ.
ಅವುಗಳೆಂದರೆ ವಿದ್ಯುತ್ ಕಾಂತಿಯ ಪರಿಣಾಮ, ವಿದ್ಯುತ್ ನ ರಾಸಾಯನಿಕ ಪರಿಣಾಮ, ವಿದ್ಯುತ್ನ ಉಷ್ಣೋತ್ಪನ್ನ ಪರಿಣಾಮ.
ವಿದ್ಯುತ್ಕಾಂತಿಯ ಪರಿಣಾಮವನ್ನು ಹೆನ್ರಿ ಕ್ರಿಶ್ಚಿಯನ್ ಓಯರ್ ಸ್ಟೆಡ್ ಪತ್ತೆಮಾಡಿದರು.ಕಾಂತತ್ವ ಮತ್ತು ವಿದ್ಯುಚ್ಛಕ್ತಿ ಜೊತೆಗೆ ಇರುತ್ತವೆ.ತಂತಿಯಲ್ಲಿ ವಿದ್ಯುತ್ ಹರಿದಾಗ ತಂತಿಯ ಸುತ್ತಲೂ ಕಾಂತಕ್ಷೇತ್ರ ಉಂಟಾಗುತ್ತದೆ. ಇದನ್ನು ವಿದ್ಯುತ್ ಕಾಂತಿಯ ಪರಿಣಾಮ ಎನ್ನುವರು.
ವಿದ್ಯುತ್ ನ ರಾಸಾಯನಿಕ ಪರಿಣಾಮ:
ವಿದ್ಯುತ್, ಕೆಲವು ರಾಸಾಯನಿಕಗಳ ಮೂಲಕ ಹರಿದಾಗ ರಾಸಾಯನಿಕ ಬದಲಾವಣೆಯನ್ನು ಉಂಟುಮಾಡುತ್ತದೆ. ಇದನ್ನು ವಿದ್ಯುತ್ನ ರಾಸಾಯನಿಕ ಪರಿಣಾಮ ಎನ್ನುತ್ತೇವೆ.ವಿದ್ಯುತ್ತಿನಿಂದ ರಾಸಾಯನಿಕ ಬದಲಾವಣೆಗೆ ಒಳಗಾಗುವ ರಾಸಾಯನಿಕಗಳನ್ನು ವಿದ್ಯುತ್ ವಿಭಾಜ್ಯ ಗಳು ಅಥವಾ ಎಲೆಕ್ಟ್ರೋಲೈಟ್ ಗಳು ಎನ್ನುತ್ತೇವೆ.ಉದಾಹರಣೆಗೆ ಅಡುಗೆ ಉಪ್ಪು,ಸಕ್ಕರೆ, ಹರಳೆಣ್ಣೆ ಇತ್ಯಾದಿ.
ವಿದ್ಯುತ್ನ ಉಷ್ಣೋತ್ಪನ್ನ ಪರಿಣಾಮ ;
ತಂತಿಯಲ್ಲಿ ವಿದ್ಯುತ್ ಹರಿದಾಗ ಸ್ವಲ್ಪ ವಿದ್ಯುಚ್ಛಕ್ತಿಯು ಉಷ್ಣವಾಗಿ ಪರಿವರ್ತನೆಯಾಗುತ್ತದೆ.ಇದನ್ನು ವಿದ್ಯುತ್ನ ಉಷ್ಣೋತ್ಪನ್ನ ಪರಿಣಾಮ ಎನ್ನುತ್ತೇವೆ.ವಿದ್ಯುತ್ ಬಲ್ಬ್ ,ಬಾಯ್ಲರ್ ,ವಿದ್ಯುತ್ ಇಸ್ತ್ರಿ ಪೆಟ್ಟಿಗೆ,  ವಿದ್ಯುತ್ ಫ್ಯೂಸ್ ಇತ್ಯಾದಿ ಉಪಕರಣಗಳು ವಿದ್ಯುತ್ ನ ಉಷ್ಣೋತ್ಪನ್ನ ಪರಿಣಾಮದ ಮೇಲೆ ಕೆಲಸ ಮಾಡುತ್ತವೆ.
  ವಿದ್ಯುತ್ ಫ್ಯೂಸ್ ಎಂದರೇನು ?
   ವಿದ್ಯುತ್ ಫ್ಯೂಸ್ ಒಂದು ಸುರಕ್ಷಾ ಸಾಧನ.ಇದು ಸೀಸ ಮತ್ತು ತವರ ದಿಂದ ಆದ ಮಿಶ್ರಲೋಹ ವಾಗಿದೆ.ಇದಕ್ಕೆ ವಿದ್ಯುತ್ ರೋಧ ಹೆಚ್ಚು ಮತ್ತು ದ್ರವನಬಿಂದು ಕಡಿಮೆಯಾಗಿದೆ.
ಇದನ್ನು ವಿದ್ಯುನ್ಮಂಡಲ ದ ಆರಂಭದಲ್ಲಿ ಜೋಡಿಸಿರುತ್ತಾರೆ. ಯಾವುದೇ ಕಾರಣಗಳಿಂದ ವಿದ್ಯುನ್ಮಂಡಲ ಕ್ಕೆ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ವಿದ್ಯುತ್ ಹರಿದು ಬಂದಾಗ ವಿದ್ಯುತ್ ಫ್ಯೂಸ್ ಕರಗಿ ವಿದ್ಯುನ್ಮಂಡಲಕ್ಕೆ ವಿದ್ಯುತ್ ಪ್ರವಾಹವನ್ನು ಕಡಿತಗೊಳಿಸುತ್ತದೆ.
ದ್ರವನಬಿಂದು ಕಡಿಮೆ ಮತ್ತು ವಿದ್ಯುತ್ ರೋಧ ಹೆಚ್ಚಿರುವುದರಿಂದ ವಿದ್ಯುತ್ ಫ್ಯೂಸ್ ಈ ಕಾರ್ಯ ಮಾಡಲು ಸಾಧ್ಯವಾಯಿತು.
ಇದರಿಂದ ವಿದ್ಯುನ್ಮಂಡಲ ಮತ್ತು ಅದರಲ್ಲಿ ಜೋಡಿಸಿರುವ ಬೆಲೆಬಾಳುವ ಉಪಕರಣಗಳು ಸುರಕ್ಷಿತವಾಗಿ ಉಳಿಯುತ್ತವೆ.ಹೀಗೆ ವಿದ್ಯುತ್ ಫ್ಯೂಸ್ ಉಂಟಾಗ ಬಹುದಾದ ದೊಡ್ಡ ಹಾನಿಯನ್ನು ತಪ್ಪಿಸುತ್ತದೆ.
ವಿದ್ಯುತ್ ಶಕ್ತಿಯ ಆಕರಗಳು ;
ವಿದ್ಯುಜ್ಜನಕ ವಿದ್ಯುತ್ತನ್ನು ಗಾಳಿ ನೀರು ಇವುಗಳ ಶಕ್ತಿಯಿಂದ ಉತ್ಪಾದಿಸುತ್ತದೆ.
ಸೌರಕೋಶಗಳು ಸೌರಶಕ್ತಿಯಿಂದ ವಿದ್ಯುತ್ ಅನ್ನು ಉತ್ಪಾದಿಸುತ್ತವೆ.
ವಿದ್ಯುತ್ ಕೋಶವು ರಾಸಾಯನಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಸಾಧನವಾಗಿದೆ.
ಶುಷ್ಕಕೋಶ ವೂ ರಾಸಾಯನಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುತ್ತದೆ.

8ನೇ ತರಗತಿ ವಿಜ್ಞಾನ|| ಕಲಿಕಾ ಚೇತರಿಕೆ || ಲೋಹಗಳು ಮತ್ತು ಅಲೋಹಗಳು || ಕಲಿಕಾ ಫಲಗಳು 3

ಕಲಿಕಾ ಫಲ 3   ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವರು ಹಾಗೂ ಆಮ್ಲ ಪ್ರತ್ಯಾಮ್ಲಗಳಲ್ಲಿರುವ ಲೋಹ ಮತ್ತು ಅಲೋಹಗಳನ್ನು ಗುರುತಿಸುವರು.   ಕಲಿಕಾ ...